'ನನ್ನ ಆರೋಗ್ಯದ ಬಗ್ಗೆ ಹಲವರಿಗೆ ಗೊಂದಲ ಇತ್ತು. ಈ ಸಂದರ್ಭದಲ್ಲಿ ಕೊರೊನಾ ಬಿಟ್ಟರೆ ಇನ್ನೇನಿರುತ್ತದೆ ಹೇಳಿ. ಮೂರು ವಾರಗಳ ಕೆಳಗೆ `ಬಿಗ್ ಬಾಸ್' ಕಾರ್ಯಕ್ರಮವನ್ನು ನಡೆಸಿಕೊಡುವ ಸಂದರ್ಭದಲ್ಲಿ ಕಾಲುಗಳಲ್ಲಿ ಸಣ್ಣ ಪ್ರಮಾಣದ ನೋವು ಕಾಣಿಸಿಕೊಂಡಿತು. ಎಪಿಸೋಡ್ ಶೂಟಿಂಗ್ ಮುಗಿಯುವ ಹೊತ್ತಿಗೆ ಸುಸ್ತು ಜಾಸ್ತಿಯಾಯಿತು. ಮನೆಗೆ ಬಂದ ಮೇಲೆ ಕಾಲು ಮತ್ತು ಪಾದಗಳ ನೋವು ಹೆಚ್ಚಾಯಿತು. ವಿಶ್ರಾಂತಿ ಪಡೆಯಬೇಕು ಎಂದೆನಿಸಿತು. ಎರಡನೇ ದಿನದ ಹೊತ್ತಿಗೆ ಚಿಕಿತ್ಸೆ ಪಡೆಯದೇ ಇರೋದು ಬಹಳ ಕಷ್ಟ ಅಂತ ಅರ್ಥವಾಗಿ ಚಿಕಿತ್ಸೆಗೆ ಒಳಗಾದೆ' ಎಂದು ಸುದೀಪ್ ಹೇಳಿಕೊಂಡಿದ್ದಾರೆ.
ಮನೆಯಲ್ಲಿ ಒಬ್ಬನೇ ಇದ್ದೆ!
'ಕೊರೊನಾದಿಂದ ಹೇಗೆ ಹೊರಗೆ ಬಂದೆ ಎಂದು ಟಿಪ್ಸ್ ಕೊಡುವುದು ಬಹಳ ಕಷ್ಟ ಎಂದು ಅಭಿಪ್ರಾಯಪಟ್ಟಿರುವ ಸುದೀಪ್, ಒಬ್ಬೊಬ್ಬರ ದೇಹ ಒಂದೊಂದು ರೀತಿ ಇರುತ್ತದೆ. ಸಲಹೆ ಕೊಡೋದು ಕಷ್ಟ. ಸರಳವಾಗಿ ಹೇಳಬೇಕೆಂದರೆ, ಈ ಸಮಯದಲ್ಲಿ ಮನೆಯಲ್ಲಿ ಸುಮ್ಮನೆ ಇದ್ದು ಬಿಡಿ. ಕಳೆದ ಮೂರು ವಾರಗಳಿಂದ ನಾನು ಮನೆಯಲ್ಲಿ ಒಬ್ಬನೇ ಇದ್ದೇನೆ. ಪತ್ನಿ ಪ್ರಿಯಾ ಮತ್ತು ಮಗಳು ಸಾನ್ವಿ ಹೈದರಾಬಾದ್‌ನಲ್ಲಿ ಇದ್ದಾರೆ. ಮನೆಯಲ್ಲಿ ಒಬ್ಬನೇ ಇದ್ದಾಗ ಅಡುಗೆ ಮಾಡಿಕೊಂಡು ಊಟ ಮಾಡುತ್ತಲೇ ಮನೆಯಲ್ಲಿ ಹೆಚ್ಚು ಕಾಲ ಕಳೆದೆ. ನನಗೇನು ಬೇಕೋ ಅದನ್ನು ಮಾಡಿಕೊಂಡು ಇದ್ದೆ' ಎನ್ನುತ್ತಾರೆ ಕಿಚ್ಚ
ಬಹಳ ಹೆದರಿದ್ದರಂತೆ ಸುದೀಪ್!
ಸುದೀಪ್ ಈ ಸಮಯದಲ್ಲಿ ಬಹಳ ಹೆದರಿದ್ದರಂತೆ. `ನಾನು ಮತ್ತೆ ಎದ್ದುಬರಲು ಸಾಧ್ಯವಾ. ನನ್ನನ್ನು ಪ್ರೀತಿಸುವವರ ಜೊತೆಗೆ ಮಾತನಾಡುವುದಕ್ಕೆ ಸಾಧ್ಯವಾ ಎಂದೆಲ್ಲಾ ಯೋಚನೆ ಬರುತ್ತಿತ್ತು. ಒಮ್ಮೊಮ್ಮೆ ಭಯ ಆಗುತ್ತಿತ್ತು. ಮನುಷ್ಯನಿಗೆ ಭಯ ಇರಬೇಕು. ಆ ಭಯ ಇದ್ದಾಗಲೇ ನಾವು ಏನೆಲ್ಲ ಎಚ್ಚರಿಕೆಗಳನ್ನು ತೆಗೆದುಕೊಳ್ಳುವುದಕ್ಕೆ ಸಾಧ್ಯವೋ, ಅವೆಲ್ಲವನ್ನೂ ತೆಗೆದುಕೊಳ್ಳುತ್ತೇವೆ' ಎಂಬುದು ಅಭಿನಯ ಚಕ್ರವರ್ತಿಯ ಅಭಿಪ್ರಾಯ.