ಮುಂಬೈ: ಲಾಕ್ಡೌನ್ ವಿರಾಮದ ನಂತರ ಗಾಯಕಿ ಧ್ವನಿ ಭಾನುಶಾಲಿಯವರು ವೇದಿಕೆಗೆ ಮರಳಲು ನಾನು ಸಿದ್ಧ ಎಂದು ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ.
ಕೋವಿಡ್ ಹಿನ್ನೆಲೆ ಮನೆಯಲ್ಲೇ ಇದ್ದ ಬಹಳಷ್ಟು ನಟ ನಟಿಯರು ಇದೀಗ ಮತ್ತೆ ಕೆಲಸಕ್ಕೆ ಮರಳುತ್ತಿದ್ದಾರೆ. ಈ ವಾರಾಂತ್ಯದಲ್ಲಿ ಅಂದ್ರೆ ಜನವರಿ 10 ರಂದು ಪಿವಿಆರ್ ಜುಹು ಮಲ್ಟಿಪ್ಲೆಕ್ಸ್ ಸಭಾಂಗಣದಲ್ಲಿ ಧ್ವನಿ ಭಾನುಶಾಲಿಯವರ ಸಂಗೀತ ಕಾರ್ಯಕ್ರಮದ ನೇರಪ್ರಸಾರ ನಡೆಯಲಿದ್ದು, ದೇಶಾದ್ಯಂತ 17 ಕ್ಕೂ ಹೆಚ್ಚು ಪಿವಿಆರ್ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿದೆ.
ಈ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಧ್ವನಿ ಭಾನುಶಾಲಿ, ನನ್ನ ಅಭಿಮಾನಿಗಳನ್ನು ರಂಜಿಸಲು ಮತ್ತು ಚಿತ್ರಮಂದಿರಗಳಿಗೆ ನನ್ನ ಕೊಡುಗೆ ನೀಡುವುದಕ್ಕೆ ನಾನು ಕೈ ಜೋಡಿಸಿದ್ದೇನೆ. ಈ ರೀತಿಯ ಅವಕಾಶ ಮೊದಲ ಬಾರಿ ದೊರೆತಿದ್ದು, ಈ ಸಂಗೀತ ಕಚೇರಿಯನ್ನು ಎಲ್ಲರೂ ಆನಂದಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ಉತ್ತಮ ಪ್ರದರ್ಶನ ನೀಡುವ ಸಲುವಾಗಿ ಹಗಲು - ರಾತ್ರಿ ಅಭ್ಯಾಸ ಮಾಡಿದ್ದೇನೆ ಎಂದು ವಿವರಿಸಿದ್ದಾರೆ. ಈ ಹಿಂದೆ ಸಹ ಸಂಗೀತ ಅಭ್ಯಾಸದ ವಿಡಿಯೋವನ್ನು ಗಾಯಕಿ ಹಂಚಿಕೊಂಡಿದ್ದರು.
ಇನ್ನು ಅಭಿಮಾನಿಗಳು ಕೂಡ ಧ್ವನಿ ಭಾನುಶಾಲಿ ಸಂಗೀತ ಕಾರ್ಯಕ್ರಮ ವೀಕ್ಷಣೆಗಾಗಿ ತುದಿಗಾಲಿನಲ್ಲಿ ಕಾಯುತ್ತಿದ್ದು, ಇವರು ಹಾಡಿರುವ 'ಜೀತೆಂಗೆ ಹಮ್' ಹಾಡನ್ನು ಕೋವಿಡ್ -19 ಸಾಂಕ್ರಾಮಿಕದ ವಿರುದ್ಧ ಹೋರಾಡುತ್ತಿರುವ ಯೋಧರಿಗೆ ಸಮರ್ಪಿಸಲಾಗಿದೆ.