ಬಿಗ್ಬಾಸ್ ಖ್ಯಾತಿಯ ಅನುಪಮಾ ಗೌಡ ಅದಕ್ಕೂ ಮುನ್ನ ಕಿರುತೆರೆ ಧಾರಾವಾಹಿಗಳಲ್ಲಿ ನಟಿಸುತ್ತಿದ್ದರೂ ಅವರಿಗೆ ಹೇಳಿಕೊಳ್ಳುವಂತ ಬ್ರೇಕ್ ಸಿಕ್ಕಿರಲಿಲ್ಲ. 'ಅಕ್ಕ' ಧಾರಾವಾಹಿಯಲ್ಲಿ ನಟಿಸಿದ ನಂತರ ಅನುಪಮಾ ಅವರನ್ನು ಎಲ್ಲರೂ ಗುರುತಿಸಲು ಆರಂಭಿಸಿದರು.
ಆದರೆ ಅನುಪಮಾ ಬಿಗ್ಬಾಸ್ಗೆ ಎಂಟ್ರಿ ಕೊಟ್ಟಿದ್ದೇ ತಡ ಅವರ ಅದೃಷ್ಟ ಖುಲಾಯಿಸಿತು ಎಂದೇ ಹೇಳಬಹುದು. ಈ ರಿಯಾಲಿಟಿ ಶೋಗೆ ನಿರ್ದೇಶಕ ದಯಾಳ್ ಪದ್ಮನಾಭನ್ ಕೂಡಾ ಬಂದದ್ದು ಅನುಪಮಾ ಅವರಿಗೆ ನಿಜಕ್ಕೂ ಲಕ್ ತಂದುಕೊಟ್ಟಿತು. ಅಲ್ಲಿಂದ ಹೊರಬಂದ ನಂತರ ಈ ಮಾತಿನ ಮಲ್ಲಿಗೆ 'ಆ ಕರಾಳ ರಾತ್ರಿ' ಸಿನಿಮಾದಲ್ಲಿ ನಟಿಸುವ ಅವಕಾಶ ಒದಗಿ ಬಂತು. ಈ ಸಿನಿಮಾದಲ್ಲಿ ಜೆಕೆ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ದಯಾಳ್ ಅವರೇ ಈ ಸಿನಿಮಾವನ್ನು ನಿರ್ದೇಶಿಸಿದ್ದರು. ನಂತರ ರಾಘವೇಂದ್ರ ರಾಜ್ಕುಮಾರ್ ಮಗಳ ಪಾತ್ರದಲ್ಲಿ 'ತ್ರಯಂಬಕಂ' ಸಿನಿಮಾದಲ್ಲಿ ಅನುಪಮಾ ಮಿಂಚಿದರು.
ಇದೀಗ ಅವರು 'ದಿ ಫಾಲನ್' ಎಂಬ ಹಿಂದಿ ಕಿರುಚಿತ್ರದಲ್ಲಿ ನಟಿಸಲು ಆಯ್ಕೆಯಾಗಿದ್ದಾರೆ. ಈ ಕಿರುಚಿತ್ರ 4000 ವರ್ಷಗಳ ಹಿಂದಿನ ಕಥೆಯನ್ನು ನೆನಪಿಸುತ್ತದೆ. 'ಊರ್ವಿ' ಚಿತ್ರವನ್ನು ನಿರ್ದೇಶಿಸಿದ್ದ ಪ್ರದೀಪ್ ವರ್ಮಾ ಈ ಕಿರುಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಲೇಹ್, ಲಡಾಕ್ , ಮನಾಲಿ ಹಾಗೂ ಇನ್ನಿತರ ಸ್ಥಳಗಳಲ್ಲಿ ಫೋಟೋಶೂಟ್ ಮಾಡಲಿದ್ದಾರಂತೆ ಪ್ರದೀಪ್. ಅನುಪಮಾಗೆ ಹಿಂದಿ ಭಾಷೆ ಗೊತ್ತಿರುವುದರಿಂದ ಈ ಕಿರುಚಿತ್ರದಲ್ಲಿ ನಟಿಸಲು ಸುಲಭವಾಗಿದೆಯಂತೆ. ಇನ್ನು ಈ ಚಿತ್ರದಲ್ಲಿ ಕೇವಲ 4 ಪಾತ್ರಗಳು ಮಾತ್ರ ಇರಲಿದ್ದು 30 ದಿನಗಳ ಚಿತ್ರೀಕರಣ ಜರುಗಲಿದೆ ಎಂದು ನಿರ್ದೇಶಕ ಪ್ರದೀಪ್ ತಿಳಿಸಿದ್ದಾರೆ.