ಟೆಕ್ ದೈತ್ಯರಾಗಿರುವ ಮೆಟಾ ಮಾಲೀಕ ಜುಗರ್ ಬರ್ಗ್ ಮತ್ತು ಮೈಕ್ರೋಬ್ಲಾಗಿಂಗ್ X ಮಾಲೀಕ ಎಲೋನ್ ಮಸ್ಕ್ ಒಬ್ಬರಿಗೆ ಒಬ್ಬರು ಪಂಥಾಹ್ವಾನ ನೀಡಿದ್ದ ಕೇಜ್ ಫೈಟ್ ಯಾವಾಗ ನಡೆಯಲಿದೆ ಎಂಬ ಕುತೂಹಲ ಜಗತ್ತಿನ ಅನೇಕರಲ್ಲಿ ಹಾಗೇ ಉಳಿದಿದೆ. ಆದರೆ, ಈ ಕುರಿತು ಮೆಟಾ ಸಂಸ್ಥಾಪಕ ಇದೀಗ ಅಂತಿಮ ಪರದೆ ಎಳೆದಿದ್ದಾರೆ.
ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ ಥ್ರೇಡ್ನಲ್ಲಿ ತಿಳಿಸಿರುವ ಅವರು, ಎಲೋನ್ ಈ ಕೇಜ್ ಫೈಟ್ ಬಗ್ಗೆ ಗಂಭೀರವಾಗಿಲ್ಲ ಎಂಬುದನ್ನು ನಾವೆಲ್ಲಾ ಒಪ್ಪುತ್ತೇವೆ. ಇದೀಗ ಇದನ್ನು ಬಿಟ್ಟು ಮುಂದೆ ಸಾಗುವ ಸಮಯ ಬಂದಿದೆ ಎಂದಿರುವ ಅವರು, ತಮ್ಮಿಬ್ಬರ ನಡುವೆ ಯಾವುದೇ ಕೇಜ್ ಫೈಟ್ ನಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು ಮುಂದುವರಿದು ತಿಳಿಸಿರುವ ಅವರು, ನಾನು ಸರಿಯಾದ ಸಮಯ ಹಾಗೂ ದಿನ ನೀಡುತ್ತೇನೆ. ಚಾರಿಟಿಗಾಗಿ ಈ ಕೇಜ್ ಫೈಟ್ ಅಸಲಿ ಮ್ಯಾಚ್ ಮಾಡಲು ಮುಂದಾಗಿದ್ದರೂ ಎಲೋನ್ ದಿನವನ್ನು ನಿಗದಿ ಮಾಡಲಿಲ್ಲ. ಬಳಿಕ ಅವರಿಗೆ ಸರ್ಜರಿ ಆಗಬೇಕಿದೆ. ಇದೀಗ ನನ್ನನ್ನು ಹಿಂಬದಿ ಪ್ರಯೋಗಕ್ಕೆ ಕರೆದಿದ್ದಾರೆ. ಕ್ರೀಡೆಯನ್ನು ಗಂಭೀರವಾಗಿ ತೆಗೆದುಕೊಳ್ಳುವವರ ಜೊತೆಗೆ ಮಾತ್ರವೇ ನಾನು ಸ್ಪರ್ಧೆಯ ಕುರಿತು ಹೆಚ್ಚಿನ ಗಮನ ನೀಡುವುದಾಗಿ ತಿರುಗೇಟು ನೀಡಿದ್ದಾರೆ.
ಆರಂಭಿಕ ಹಂತದಲ್ಲಿ ಮೆಟಾ ಯಶಸ್ಸು ಕಂಡಾಗ ಜುಕರ್ಬರ್ಗ್ ಮತ್ತು ಟೆಸ್ಲಾ ಸಿಇಒ ಮಸ್ಕ್ ನಡುವೆ ಸ್ಪರ್ಧೆ ಏರ್ಪಟ್ಟಿತು. ಎಕ್ಸ್ ಮೈಕ್ರೋಬ್ಲಾಗಿಂಗ್ಗೆ ಸಮವಾದ ಥ್ರೇಡ್ ಅನ್ನು ಬಿಡುಗಡೆ ಮಾಡುವ ಮೂಲಕ ಇಬ್ಬರ ನಡುವಿನ ಸಮರ ಬಹಿರಂಗವಾಗಿತ್ತು. ಎಕ್ಸ್ಗೆ ಸಮವಾಗಿ ಅದೇ ರೀತಿಯಲ್ಲೇ ಬಿಡುಗಡೆ ಮಾಡಿದ ಥ್ರೇಟ್ ಆರಂಭದಲ್ಲಿ ಬಳಕೆದಾರರನ್ನು ಸೆಳೆಯುವಲ್ಲಿ ಯಶಸ್ವಿ ಕೂಡಾ ಆಗಿತ್ತು. ಮೊದಲ ದಿನವೇ 30 ಸಾವಿರ ಮಂದಿ ಇದರ ಬಳಕೆ ಮಾಡಿದರು. ಆರಂಭದಲ್ಲಿ ಉತ್ತಮ ಗಳಿಕೆಯನ್ನು ತೋರಿದರೂ ದಿನಕಳೆದಂತೆ ಇದರ ವರ್ಚಸ್ಸು ಕ್ಷೀಣಿಸಿದೆ.
ಈ ಸಮಯದಲ್ಲಿ ಮಸ್ಕ್ , ಜುಕರ್ ಬರ್ಗ್ ಅವರನ್ನು ಕೇಜ್ ಫೈಟ್ಗೆ ಆಹ್ವಾನಿಸಿದ್ದರು. ಅಲ್ಲದೇ, ಇದನ್ನು ಎಕ್ಸ್ ಮತ್ತು ಮೆಟಾ ಫ್ಲಾಟ್ಫಾರ್ಮ್ನಲ್ಲಿ ನೇರ ಪ್ರಸಾರ ಮಾಡುವುದಾಗಿ ಹೇಳಿದ್ದರು. ಜೊತೆಗೆ ಈ ಪಂದ್ಯ ಇಟಲಿಯಲ್ಲಿ ನಡೆಯಲಿದೆ ಎಂದಿದ್ದರು. ಆದರೆ, ಇದೀಗ ಈ ಹೇಳಿಕೆಯನ್ನು ಅಲ್ಲಗಳೆದಿರುವ ಮೆಟಾ ಸಂಸ್ಥಾಪಕ, ಮಸ್ಕ್ ಹೇಳುವುದನ್ನು ಕೇಳದಂತೆ ನೆಟಿಜನ್ಸ್ಗೆ ಮನವಿ ಮಾಡಿದ್ದಾರೆ.
ನನಗೆ ಕ್ರೀಡೆ ಎಂದರೆ ಇಷ್ಟ. ಎಲೋನ್ ಸವಾಲು ಹಾಕಿದಾಗಿನಿಂದ ನಾನು ಫೈಟ್ ಮಾಡಲು ಸಿದ್ದನಿದ್ದೇನೆ. ಹೇಳಿದ ದಿನಾಂಕಕ್ಕೆ ಅವರು ಒಪ್ಪಿದ್ದರೆ, ನೀವು ನನ್ನ ಬಳಿ ಕೇಳಿ. ಅಲ್ಲಿಯವರೆಗೆ, ದಯವಿಟ್ಟು ಅವರು ಹೇಳುವ ಯಾವುದನ್ನಾದರೂ ಒಪ್ಪಿಕೊಂಡಿದ್ದೇನೆ ಎಂದು ನೀವೆಲ್ಲ ಭಾವಿಸಬೇಡಿ. ಮಸ್ಕ್ ಸಿದ್ದವಾದಾಗ ಈ ಕುರಿತು ಸಂಪೂರ್ಣ ಮಾಹಿತಿ ನೀಡಲಾಗುವುದು ಎಂದು ಜುಕರ್ಬರ್ಗ್ ಹೇಳಿದ್ದಾರೆ.
ಎಲೋನ್ಗಾಗಿ ನಾನು ಉಸಿರು ಬಿಗಿ ಹಿಡಿದಿಲ್ಲ. ಆದರೆ, ನಾನು ಸಿದ್ದವಾದಾಗ ಮುಂದಿನ ಫೈಟ್ ವರದಿಯನ್ನು ಹಂಚಿಕೊಳ್ಳುತ್ತೇನೆ. ನಾನು ಸ್ಪರ್ಧಿಸಿದಾಗ ಪ್ರಮುಖ ಅಥ್ಲೀಟ್ಗಳ ರೀತಿಯಲ್ಲಿ ಆರಂಭಿಸುತ್ತೇನೆ ಎಂದಿದ್ದಾರೆ ಜುಕರ್ಬರ್ಗ್.
ಇನ್ನು ಇದಕ್ಕೆ ಖಾರವಾಗಿಯೇ ಪ್ರತಿಕ್ರಿಯಿಸಿರುವ ಮಸ್ಕ್, ಜುಕರ್ಗೆ ಸರಿಯಾಗಿ ಪಾಠ ಕಲಿಯಬೇಕು ಎಂದರೆ ಯಾಕೆ ಇನ್ನು ಕಾಯುತ್ತಿದ್ದಾರೆ. ನಾನು ಮುಂದಿನವಾರವೇ ಅವರ ಮನೆಗೆ ಹೋಗಿ ಅವರಿಗೆ ಪಾಠ ಹೇಳಿಕೊಡುತ್ತೇನೆ. ಇಲ್ಲದೇ ಹೋದಲ್ಲಿ. ಇಟಲಿಯಲ್ಲಿ ಅಖಾಡ ಸಿದ್ದವಾದಾಕ್ಷಣ ಮಾಡುತ್ತೇನೆ. ಅಥವಾ ಮುಂದಿನವಾರ ಇಬ್ಬರು ಪ್ರಾಕ್ಟೀಸ್ ಸೆಷನ್ ಅನ್ನು ಪರಿಗಣಿಸಬಹುದು ಎಂದು ಕಾಲೆಳೆದಿದ್ದಾರೆ.
ಇದನ್ನೂ ಓದಿ: Zuck vs Musk fight: ಜುಕರ್ಬರ್ಗ್ ವಿರುದ್ಧ ಕೇಜ್ ಫೈಟ್ ಟ್ವಿಟರ್ನಲ್ಲಿ ನೇರಪ್ರಸಾರ; ಮಸ್ಕ್ ಘೋಷಣೆ