ನವದೆಹಲಿ: ಮೆಟಾ ಮಾಲೀಕತ್ವದ ವಾಟ್ಸ್ಆ್ಯಪ್ ಸೆಪ್ಟೆಂಬರ್ ತಿಂಗಳಲ್ಲಿ ಭಾರತದಲ್ಲಿ ದಾಖಲೆಯ 71 ಲಕ್ಷಕ್ಕೂ ಹೆಚ್ಚು ದುರುದ್ದೇಶಪೂರಿತ ಖಾತೆಗಳನ್ನು ನಿಷೇಧಿಸಿದೆ. ಸೆಪ್ಟೆಂಬರ್ 1 ರಿಂದ 30 ರ ನಡುವೆ ಕಂಪನಿಯು 71 ಲಕ್ಷ 11 ಸಾವಿರ ಖಾತೆಗಳನ್ನು ನಿರ್ಬಂಧಿಸಿದೆ. ಹೊಸ ಐಟಿ ನಿಯಮಗಳು 2021 ಕ್ಕೆ ಅನುಸಾರವಾಗಿ ವಾಟ್ಸ್ಆ್ಯಪ್ ಈ ಕ್ರಮ ಕೈಗೊಂಡಿದೆ.
ಬಳಕೆದಾರರಿಂದ ಯಾವುದೇ ದೂರು ಬರುವ ಮೊದಲು ಈ ಖಾತೆಗಳ ಪೈಕಿ ಸುಮಾರು 25,71,000 ಖಾತೆಗಳನ್ನು ಪೂರ್ವಭಾವಿಯಾಗಿ ನಿಷೇಧಿಸಲಾಗಿದೆ ಎಂದು ವಾಟ್ಸ್ಆ್ಯಪ್ ತನ್ನ ಮಾಸಿಕ ಅನುಸರಣಾ ವರದಿಯಲ್ಲಿ ತಿಳಿಸಿದೆ. ದೇಶದಲ್ಲಿ 500 ದಶಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಅತ್ಯಂತ ಜನಪ್ರಿಯ ಮೆಸೇಜಿಂಗ್ ಪ್ಲಾಟ್ಪಾರ್ಮ್ ಆಗಿರುವ ವಾಟ್ಸ್ ಆ್ಯಪ್ ದೇಶದಲ್ಲಿ ಸೆಪ್ಟೆಂಬರ್ನಲ್ಲಿ ದಾಖಲೆಯ 10,442 ದೂರು ವರದಿಗಳನ್ನು ಸ್ವೀಕರಿಸಿದೆ ಮತ್ತು ಇದರಲ್ಲಿ 85 ರಲ್ಲಿ ಕ್ರಮ ಕೈಗೊಳ್ಳಲಾಗಿದೆ.
"ಅಕೌಂಟ್ಸ್ ಆಕ್ಷನ್ಡ್" ಎಂಬುದು ವರದಿಯ ಆಧಾರದ ಮೇಲೆ ವಾಟ್ಸ್ ಆ್ಯಪ್ ಪರಿಹಾರ ಕ್ರಮಗಳನ್ನು ತೆಗೆದುಕೊಂಡ ವರದಿಗಳನ್ನು ಸೂಚಿಸುತ್ತದೆ ಮತ್ತು ಕ್ರಮ ತೆಗೆದುಕೊಳ್ಳುವುದು ಖಾತೆಯನ್ನು ನಿಷೇಧಿಸುವುದನ್ನು ಅಥವಾ ಅದರ ಪರಿಣಾಮವಾಗಿ ಈ ಹಿಂದೆ ನಿಷೇಧಿಸಲಾದ ಖಾತೆಯನ್ನು ಪುನಃಸ್ಥಾಪಿಸುವುದನ್ನು ಸೂಚಿಸುತ್ತದೆ.
ಲಕ್ಷಾಂತರ ಭಾರತೀಯ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಸಬಲೀಕರಣಗೊಳಿಸುವ ಪ್ರಯತ್ನದಲ್ಲಿ, ಕೇಂದ್ರವು ಇತ್ತೀಚೆಗೆ ಕುಂದುಕೊರತೆ ಮೇಲ್ಮನವಿ ಸಮಿತಿಯನ್ನು (ಜಿಎಸಿ) ಪ್ರಾರಂಭಿಸಿದೆ. ಇದು ಕಂಟೆಂಟ್ ಮತ್ತು ಇತರ ವಿಷಯಗಳ ಬಗ್ಗೆ ಬಳಕೆದಾರರ ದೂರುಗಳನ್ನು ಪರಿಶೀಲಿಸುತ್ತದೆ. ಬಿಗ್ ಟೆಕ್ ಕಂಪನಿಗಳನ್ನು ಪಳಗಿಸಲು ದೇಶದ ಡಿಜಿಟಲ್ ಕಾನೂನುಗಳನ್ನು ಬಲಪಡಿಸುವ ಕ್ರಮವಾದ ಹೊಸದಾಗಿ ರಚಿಸಲಾದ ಸಮಿತಿಯು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳ ನಿರ್ಧಾರಗಳ ವಿರುದ್ಧ ಬಳಕೆದಾರರ ಮನವಿಗಳನ್ನು ಪರಿಶೀಲಿಸುತ್ತದೆ.
ವಾಟ್ಸ್ಆ್ಯಪ್ ಇದೊಂದು ಉಚಿತ, ಮಲ್ಟಿ ಪ್ಲಾಟ್ಫಾರ್ಮ್ ಮೆಸೇಜಿಂಗ್ ಅಪ್ಲಿಕೇಶನ್ ಆಗಿದ್ದು, ಇದರ ಮೂಲಕ ನೀವು ವಿಡಿಯೋ ಮತ್ತು ಧ್ವನಿ ಕರೆಗಳನ್ನು ಮಾಡಬಹುದು ಮತ್ತು ಪಠ್ಯ ಸಂದೇಶಗಳನ್ನು ಕಳುಹಿಸಬಹುದು. ಪಿಡಿಎಫ್ ಗಳು, ಸ್ಪ್ರೆಡ್ ಶೀಟ್ ಗಳು ಮತ್ತು ಸ್ಲೈಡ್ ಶೋಗಳಂತಹ ಎಲ್ಲಾ ರೀತಿಯ ದಾಖಲೆಗಳನ್ನು ವಾಟ್ಸ್ಆ್ಯಪ್ ಮೂಲಕ ಕಳುಹಿಸಬಹುದು.
ವಿಶ್ವದಲ್ಲಿ 2 ಬಿಲಿಯನ್ ಸಕ್ರಿಯ ಬಳಕೆದಾರರನ್ನು ಹೊಂದಿರುವ ವಾಟ್ಸ್ಆ್ಯಪ್ ವಿಶೇಷವಾಗಿ ವಿವಿಧ ದೇಶಗಳಲ್ಲಿ ವಾಸಿಸುವ ಮತ್ತು ಸಂಪರ್ಕದಲ್ಲಿರಲು ಬಯಸುವ ಜನತೆಯಲ್ಲಿ ಜನಪ್ರಿಯವಾಗಿದೆ. ಫೇಸ್ಬುಕ್ ಒಡೆತನದ ಇದು ವಿಶ್ವದ ಅತ್ಯಂತ ಜನಪ್ರಿಯ ಮೆಸೇಜಿಂಗ್ ಸೇವೆಗಳಲ್ಲಿ ಒಂದಾಗಿದೆ.
ಇದನ್ನೂ ಓದಿ : ಲಾವಾ 5ಜಿ ಸ್ಮಾರ್ಟ್ಫೋನ್ ಬ್ಲೇಜ್ -2 ಲಾಂಚ್; ಬೆಲೆ ಇಷ್ಟು ಕಡಿಮೆ!