ಸ್ಯಾನ್ ಫ್ರಾನ್ಸಿಸ್ಕೋ: ಟ್ವಿಟರ್ ಹೊಸ ಖಾತೆಗಳನ್ನು ಪ್ರಾರಂಭಿಸಿದಾಗ 90 ದಿನಗಳವರೆಗೆ 'ಬ್ಲೂ ಟಿಕ್ ಚಂದಾದಾರಿಕೆ ಸೇವೆ'ಯನ್ನು ಖರೀದಿಸಲು ಅನುಮತಿಸುವುದಿಲ್ಲ. ಇದರರ್ಥ ಬಳಕೆದಾರರು ಹೊಸ ಖಾತೆಯನ್ನು ತಕ್ಷಣವೇ ಪರಿಶೀಲಿಸಲು ಸಾಧ್ಯವಾಗುವುದಿಲ್ಲ ಎಂದು ವರದಿಯಾಗಿದೆ.
ಮೂಲಗಳ ಪ್ರಕಾರ, ನ.9, 2022 ರಂದು ಅಥವಾ ನಂತರ ರಚಿಸಲಾದ ಟ್ವಿಟರ್ ಖಾತೆಗಳು ಈ ಸಮಯದಲ್ಲಿ ಟ್ವಿಟರ್ ಬ್ಲೂ ಟಿಕ್ಗೆ ಚಂದಾದಾರರಾಗಲು ಸಾಧ್ಯವಾಗುವುದಿಲ್ಲ.
ಇತ್ತೀಚೆಗೆ, ಸಿಇಒ ಎಲೋನ್ ಮಸ್ಕ್ ಅವರು ಟ್ವಿಟರ್‌ನ 8 ಡಾಲರ್ ಮೊತ್ತದ ಬ್ಲೂ ಟಿಕ್ ಚಂದಾದಾರಿಕೆ ಸೇವೆಯನ್ನು ನ. 29 ರಿಂದ ಮರು ಪ್ರಾರಂಭಿಸಲಾಗುವುದು ಎಂದು ಹೇಳಿದ್ದಾರೆ. ವಾರದ ಹಿಂದೆ ಈ ಯೋಜನೆಯನ್ನು ಜಾರಿಗೊಳಿಸಿದ್ದ ಟ್ವಿಟರ್, ನಕಲಿ ಖಾತೆಗಳ ಹಾವಳಿಯಿಂದಾಗಿ ಇದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು.
ಅಕ್ಟೋಬರ್ 27 ರಂದು ಎಲಾನ್ ಮಸ್ಕ್ ಟ್ವಿಟರ್‌ನ ನಿಯಂತ್ರಣವನ್ನು ತಮ್ಮ ಕೈಗೆ ತೆಗೆದುಕೊಳ್ಳುವ ಮೊದಲು ಸೆಲೆಬ್ರಿಟಿಗಳು, ಸರ್ಕಾರಿ ಮುಖ್ಯಸ್ಥರು ಮತ್ತು ಇತರ ಗಣ್ಯರಿಗೆ ಬ್ಲೂ ಟಿಕ್ ಅನ್ನು ನೀಡಲಾಗುತ್ತಿತ್ತು. ಟ್ವಿಟರ್ ಪರಿಶೀಲನೆ ಬಳಿಕ ಈ ರೀತಿಯ ಬ್ಲೂ ಟಿಕ್ ನೀಡುತ್ತಿತ್ತು.
ಜಾಹೀರಾತುದಾರರನ್ನು ಉಳಿಸಿಕೊಳ್ಳಲು ಮತ್ತು ಆದಾಯವನ್ನು ಗಳಿಸುವ ಕ್ರಮವಾಗಿ ಟ್ವಿಟರ್ ಈ 8 ಡಾಲರ್‌ನ ಚಂದಾದಾರಿಕೆ ಯೋಜನೆಯನ್ನು ಹೊರತಂದಿತ್ತು. ಆದರೆ, ಇದಾದ ಬೆನ್ನಲ್ಲೇ ನಕಲಿ ಖಾತೆಗಳ ಹಾವಳಿ ಆರಂಭವಾಗಿದ್ದರಿಂದ ಯೋಜನೆಯನ್ನು ತಕ್ಷಣವೇ ನಿಲ್ಲಿಸಬೇಕಾದ ಪರಿಸ್ಥಿತಿ ಸೃಷ್ಟಿಯಾಗಿತ್ತು.
ಇದನ್ನೂ ಓದಿ: ಇನ್ನು ಟ್ವಿಟರ್ ಬ್ಲೂ ಟಿಕ್ ಫ್ರೀ ಅಲ್ಲ.. ಪ್ರತಿ ತಿಂಗಳು 20 ಡಾಲರ್ ನೀಡಬೇಕು..! ಭಾರತದಲ್ಲಿ ಅದರ ಮೊತ್ತ ಎಷ್ಟು ಗೊತ್ತಾ?