ಟೋಕಿಯೊ(ಜಪಾನ್): ಚಂದ್ರನ ಮೇಲೆ ಭಾರತ ತನ್ನ ಐತಿಹಾಸಿಕ ಸಾಫ್ಟ್ ಲ್ಯಾಂಡಿಂಗ್ ಸಾಧನೆ ಮಾಡಿದ ಬಳಿಕ ಇಡೀ ವಿಶ್ವದ ಗಮನ ಜಪಾನ್‌ನತ್ತ ನೆಟ್ಟಿತ್ತು. ಭಾರತದ ಚಂದ್ರಯಾನ-3 ಯಶಸ್ಸಿನ ನಂತರ ಜಪಾನ್ ಚಂದ್ರನತ್ತ ನೌಕೆ ಕಳುಹಿಸಲು ಸಿದ್ಧತೆ ನಡೆಸಿದೆ.
ಜಪಾನಿನ ಬಾಹ್ಯಾಕಾಶ ಸಂಸ್ಥೆ ಇಂದು ಬೆಳಗ್ಗೆ ಚಂದ್ರನ ಮೇಲ್ಮೈಗೆ ಲ್ಯಾಂಡರ್ ಮತ್ತು ಎಕ್ಸ್-ರೇ ಮಿಷನ್ ನೌಕೆಯನ್ನು ಉಡಾವಣೆ ಮಾಡಲು ನಿರ್ಧರಿಸಿತ್ತು. ದೇಶದ ಮೊದಲ ಚಂದ್ರಯಾನ ಲ್ಯಾಂಡರ್ ಹೊತ್ತ H2A ರಾಕೆಟ್ ಉಡಾವಣೆ ಕಾರ್ಯಾಚರಣೆಯನ್ನು ಪ್ರತಿಕೂಲ ಹವಾಮಾನದಿಂದಾಗಿ ಮುಂದೂಡಲಾಗಿದೆ ಎಂದು ಜಪಾನ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್( NHK) ವರದಿ ಮಾಡಿದೆ.
ಇಂದು ಬೆಳಗ್ಗೆ 9:26 ಗಂಟೆಗೆ ಎಕ್ಸ್-ರೇ ಸ್ಪೆಕ್ಟ್ರೋಸ್ಕೋಪಿ ಮತ್ತು ಇಮೇಜಿಂಗ್ ಸ್ಯಾಟಲೈಟ್ (XRISM) ಮತ್ತು ಸ್ಮಾಲ್ ಲೂನಾರ್ ಲ್ಯಾಂಡರ್ ಡೆಮಾನ್ಸ್ಟ್ರೇಷನ್ ವೆಹಿಕಲ್ (ಎಸ್ಎಲ್ಐಎಂ) ಹೊತ್ತ ಹೆಚ್-2ಎ ರಾಕೆಟ್ ಜಪಾನ್‌ನ ನೈಋತ್ಯದಲ್ಲಿರುವ ಕಾಗೋಶಿಮಾ ಪ್ರಾಂತ್ಯದ ತನೆಗಾಶಿಮಾ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲು ನಿರ್ಧರಿಸಲಾಗಿತ್ತು.
ಚಂದ್ರನ ಶೋಧನೆಗಾಗಿ ಸ್ಮಾರ್ಟ್ ಲ್ಯಾಂಡರ್ ಅಥವಾ ಸ್ಲಿಮ್ (Smart Lander for Investigating Moon)ನ್ನು ಅಭಿವೃದ್ಧಿಪಡಿಸಲಾಗಿದೆ. ಜಪಾನ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ ಪ್ರಕಾರ 'ಜಪಾನ್ ಏರೋಸ್ಪೇಸ್ ಎಕ್ಸ್‌ಪ್ಲೋರೇಶನ್ ಏಜೆನ್ಸಿ(JAXA) ಉದ್ಧೇಶ ಚಂದ್ರನ ಮೇಲಿನ ಬಂಡೆಗಳನ್ನು ಅನ್ವೇಷಿಸುವುದು ಮತ್ತು ನಿಖರವಾದ ಲ್ಯಾಂಡಿಂಗ್ ಕಾರ್ಯವಿಧಾನಗಳನ್ನು ಒಳಗೊಂಡಿದೆ.
ಜಪಾನಿನ ಭಾಷೆಯಲ್ಲಿ "ಮೂನ್ ಸ್ನೈಪರ್" ಎಂದೂ ಕರೆಯಲ್ಪಡುವ ಸ್ಲಿಮ್, ಉಡಾವಣೆಯ 3 ರಿಂದ 4 ತಿಂಗಳ ನಂತರ ಚಂದ್ರನ ಕಕ್ಷೆಗೆ ತಲುಪುವ ನಿರೀಕ್ಷೆಯಿದೆ. ಇದು ಯಶಸ್ವಿಯಾದರೆ, ಬಾಹ್ಯಾಕಾಶ ನೌಕೆಯು ಶಿಯೋಲಿ ಕುಳಿಯ (Shioli Crater) ಇಳಿಜಾರಿನಲ್ಲಿ ಇಳಿಯುತ್ತದೆ. XRISM ಇದು ಯುರೋಪಿಯನ್ ಸ್ಪೇಸ್ ಏಜೆನ್ಸಿ ಇಎಸ್ಎಯ ಸಹಯೋಗದಲ್ಲಿ, ನಾಸಾ ಮತ್ತು ಜಾಕ್ಸಾಗಳ ಜಂಟಿ ಸಂಸ್ಥೆಯಾಗಿದೆ. ಗ್ಯಾಲಕ್ಸಿಗಳನ್ನು ಆವರಿಸಿರುವ ಬಿಸಿ ಅನಿಲ ಮೋಡಗಳು ಮತ್ತು ಕಪ್ಪು ಕುಳಿಗಳಲ್ಲಿ ಉಂಟಾಗುವ ಸ್ಫೋಟಗಳಂತಹ ತೀವ್ರ ವಿದ್ಯಮಾನಗಳಿಂದ ಬಿಡುಗಡೆಯಾಗುವ ಎಕ್ಸ್-ರೇ ಕಿರಣಗಳನ್ನು ಇಂದು ಪರಿಶೀಲಿಸಲಿದೆ.
ಇದು ಯಶಸ್ವಿಯಾದರೆ ರಷ್ಯಾ, ಯುಎಸ್, ಚೀನಾ ಮತ್ತು ಭಾರತದ ನಂತರ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಯುವ ಐದನೇ ದೇಶ ಜಪಾನ್ ಆಗಲಿದೆ. ಈ ಮಿಷನ್ನ ಉಪಗ್ರಹದಲ್ಲಿ ಎಕ್ಸ್-ರೇ ಇಮೇಜಿಂಗ್ ಮತ್ತು ಸ್ಪೆಕ್ಟ್ರೋಸ್ಕೋಪಿ ಮಿಷನ್ (XRISM)ಗಳನ್ನು ಅಳವಡಿಸಲಾಗಿರುತ್ತದೆ. ಇದು ವಿಜ್ಞಾನಿಗಳಿಗೆ ನಕ್ಷತ್ರಗಳು ಮತ್ತು ಗ್ಯಾಲಕ್ಸಿಗಳಲ್ಲಿನ ಪ್ಲಾಸ್ಮಾವನ್ನು ವೀಕ್ಷಿಸಲು ಸಹಾಯ ಮಾಡುತ್ತದೆ.
ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಇಳಿಸಿದ ಮೊದಲ ದೇಶ: 'ಯಾವ ವೈಫಲ್ಯವೂ ಅಂತಿಮವಲ್ಲ. ಸಾಧನೆಯ ಹೊಸ ಹೆಜ್ಜೆ ಆರಂಭವಾಗುವುದು ಅಂತಿಮವಾದ ಸ್ಥಳದಿಂದಲೇ' ಎಂಬಂತೆ ಇಸ್ರೋದ ಮಹತ್ವಾಕಾಂಕ್ಷೆಯ ಚಂದ್ರಯಾನ-3 ರ ಲ್ಯಾಂಡರ್ ಮಾಡ್ಯೂಲ್ (ಎಲ್‌ಎಂ) ಚಂದ್ರನ ಮೇಲ್ಮೈಯನ್ನು ಸ್ಪರ್ಶಿಸಿದೆ. ಈ ಸಾಧನೆ ಮಾಡಿದ ನಾಲ್ಕನೇ ದೇಶ ಭಾರತ. ಈ ಹಿಂದೆ ಅಮೆರಿಕ, ರಷ್ಯಾ ಮತ್ತು ಚೀನಾ ಚಂದ್ರನ ಅಂಗಳ ತಲುಪಿದ ಸಾಧನೆ ಮಾಡಿದ್ದವು. ಆದರೆ, ದಕ್ಷಿಣ ಧ್ರುವದಲ್ಲಿ ಅಡಿಯಿಟ್ಟ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.
ಇದನ್ನೂ ಓದಿ: ಚಂದ್ರನತ್ತ ಜಪಾನ್; ಲ್ಯಾಂಡರ್ ಮತ್ತು ಎಕ್ಸ್ ರೇ ಮಿಷನ್ ನೌಕೆ ಸೋಮವಾರ ಉಡಾವಣೆ ಸಾಧ್ಯತೆ