ವಾಷಿಂಗ್ ಮಷಿನ್ಗಳ ಆವಿಷ್ಕಾರದ ನಂತರ ಬಟ್ಟೆ ಒಗೆಯುವುದು ಬಹಳೇ ಸುಲಭವಾಗಿದೆ. ಆದರೆ, ನೀರು ಮಾತ್ರ ಸಿಕ್ಕಾಪಟ್ಟೆ ಬೇಕಾಗುತ್ತದೆ ಎಂಬುದು ಸತ್ಯ. ಇನ್ನು ಅದಕ್ಕಾಗಿ ಬಳಸಲಾಗುವ ವಿಶೇಷ ಡಿಟರ್ಜೆಂಟ್ ಪೌಡರ್ಗಳು ಮತ್ತು ಲಿಕ್ವಿಡ್ಗಳು ಜೇಬಿಗೆ ಒಂದಿಷ್ಟು ಭಾರವಾಗುತ್ತವೆ. ಇವೆಲ್ಲವೂ ಇಲ್ಲದೆ ಬಟ್ಟೆ ಒಗೆಯುವಂತಿದ್ದರೆ ಎಷ್ಟು ಚೆನ್ನಾಗಿತ್ತು ಎಂದು ನಿಮಗೆ ಯಾವಾಗಲಾದರೂ ಅನಿಸಿದೆಯೆ? ಇಂಥದೊಂದು ಫೀಲಿಂಗ್ ನಿಮಗೆ ಬಂದಿದ್ದರೆ, ಅದು ಸಾಕಾರವಾಗುವ ಸಮಯ ಇವಾಗ ಬಂದಿದೆ.
ಚಂಡೀಗಢ ಮೂಲದ '80Wash' (80 ವಾಶ್) ಎಂಬ ಕಂಪನಿಯು ಇಂಥ ಅದ್ಭುತವಾದ ಮಷಿನ್ ಒಂದನ್ನು ತಯಾರಿಸಿದೆ. ಒಂದೇ ಒಂದು ಕಪ್ ನೀರಿನಿಂದ ಯಾವುದೇ ಡಿಟರ್ಜೆಂಟ್ ಅಥವಾ ಸೋಪ್ ಇಲ್ಲದೇ ಇದು ಬಟ್ಟೆಗಳನ್ನು ಒಗೆದು ಕೊಡುತ್ತದೆ.
ವಾಷಿಂಗ್ ಮಷಿನ್ ತಂತ್ರಜ್ಞಾನವು ಕಾಲಕಾಲಕ್ಕೆ ಸುಧಾರಿಸುತ್ತಲೇ ಇದೆ. ಆದರೆ, ನೀರಿನ ಬಳಸುವಿಕೆಯ ವಿಚಾರದಲ್ಲಿ ಮಾತ್ರ ಅಂಥ ಬದಲಾವಣೆಯೇನೂ ಆಗಿರಲಿಲ್ಲ. ಒಂದು ಚಿಕ್ಕ ಕಲೆಯನ್ನು ನಿವಾರಿಸಲು ಕೆಲವೊಮ್ಮೆ ಸುಮಾರು 100 ಲೀಟರ್ ನೀರು ಬೇಕಾಗುತ್ತದೆ. ಹೀಗೆ ಬಳಸಿದ ನೀರು ತ್ಯಾಜ್ಯವಾಗುತ್ತದೆ. ಸೋಪು, ಡಿಟರ್ಜೆಂಟ್ ಸೇರಿದ ಈ ನೀರು ಕೊನೆಗೆ ಚರಂಡಿ ಸೇರುತ್ತದೆ. ನಂತರ ಕೆರೆ ಮತ್ತು ನದಿಗಳಿಗೆ ಈ ನೀರು ಸೇರಿಕೊಳ್ಳುತ್ತದೆ.
ಆದರೆ 80 ವಾಶ್ ಕಂಪನಿಯ ವಾಷಿಂಗ್ ಮಷಿನ್ ಈ ಎಲ್ಲ ಸಮಸ್ಯೆಗಳನ್ನು ನಿವಾರಿಸಲಿದೆ. ಅತ್ಯಂತ ಕಡಿಮೆ ನೀರು..ಅಂದರೆ ಒಂದು ಕಪ್ ನೀರಿನಿಂದ ಈ ಮಷಿನ್ 5 ಬಟ್ಟೆಗಳನ್ನು ಒಗೆಯಬಲ್ಲದು. ಅದೂ ಸೋಪ್ ಇಲ್ಲದೇ ಕೇವಲ 80 ಸೆಕೆಂಡುಗಳಲ್ಲಿ. ಬಟ್ಟೆ ಹೆಚ್ಚು ಕೊಳಕಾಗಿದ್ದರೆ ಕೆಲವೊಮ್ಮೆ ಒಂದಿಷ್ಟು ಹೆಚ್ಚು ಸಮಯ ತೆಗೆದುಕೊಳ್ಳಬಹುದು.
ಓದಿ: ಬರಲಿದೆ ನೀರಿಲ್ಲದೇ ಬಟ್ಟೆ ತೊಳೆಯುವ ಯಂತ್ರ: ಹೊಸ ತಂತ್ರಜ್ಞಾನ ರೂಪಿಸುತ್ತಿದೆ ಎಲ್ಜಿ ಕಂಪನಿ
ರೂಬಲ್ ಗುಪ್ತಾ, ನಿತಿನ್ ಕುಮಾರ ಸಲೂಜಾ ಮತ್ತು ವರಿಂದರ್ ಸಿಂಗ್ ಇವರು 80 ವಾಶ್ ಕಂಪನಿಯ ಸಂಸ್ಥಾಪಕರಾಗಿದ್ದಾರೆ. ಇವರು ತಯಾರಿಸಿರುವ ವಾಷಿಂಗ್ ಮಷಿನ್ ಹಬೆಯ ತಂತ್ರಜ್ಞಾನವನ್ನು ಆಧರಿಸಿದೆ. ಕಡಿಮೆ ರೇಡಿಯೊ ಫ್ರಿಕ್ವೆನ್ಸಿಯ ಮೈಕ್ರೊವೇವ್ ತಂತ್ರಜ್ಞಾನವು ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ.
ಬಟ್ಟೆಗಳನ್ನು ಮಾತ್ರವಲ್ಲದೇ ಈ ಮಷಿನ್ ಪಿಪಿಇ ಕಿಟ್ಗಳನ್ನು ಸಹ ಸ್ವಚ್ಛ ಮಾಡಬಲ್ಲದು. ಕೋಣೆಯ ತಾಪಮಾನದಲ್ಲಿ ಉತ್ಪನ್ನವಾದ ಡ್ರೈ ಸ್ಟೀಂ ಬಟ್ಟೆಯ ಕೊಳೆ, ಧೂಳುಗಳನ್ನು ತೊಳೆದು ಹಾಕುತ್ತದೆ. 7 ರಿಂದ 8 ಕೆಜಿ ಸಾಮರ್ಥ್ಯದ ಮಷಿನ್ ಒಂದು ಬಾರಿಗೆ 5 ಬಟ್ಟೆಗಳನ್ನು ಒಗೆಯಬಲ್ಲದು. ಅದೇ ರೀತಿ 70 ರಿಂದ 80 ಕೆಜಿ ಯಂತ್ರ ಒಂದೇ ಬಾರಿಗೆ 50 ಬಟ್ಟೆಗಳನ್ನು ಒಗೆಯುತ್ತದೆ.
ಸದ್ಯ ಈ ಮಷಿನ್ ಅನ್ನು ಪ್ರಾಯೋಗಿಕವಾಗಿ ಮೂರು ನಗರಗಳ ಏಳು ಸ್ಥಳಗಳಲ್ಲಿ ಅಳವಡಿಸಲಾಗಿದೆ. ಹಾಸ್ಟೆಲ್ ವಿದ್ಯಾರ್ಥಿಗಳು ತಿಂಗಳಿಗೆ 200 ರೂಪಾಯಿ ಪಾವತಿಸಿ ಇದರಲ್ಲಿ ಬಟ್ಟೆ ಒಗೆದುಕೊಳ್ಳುವ ಅವಕಾಶ ನೀಡಲಾಗಿದೆ.