ವಾಷಿಂಗ್ಟನ್ : ಅಮೆರಿಕದಲ್ಲಿ ನಡೆಯಲಿರುವ ಪ್ರತಿಷ್ಠಿತ ನಾಸಾ ಹ್ಯೂಮನ್ ಎಕ್ಸ್ ಪ್ಲೋರೇಷನ್ ರೋವರ್ ಚಾಲೆಂಜ್ (ಎಚ್ ಇಆರ್ ಸಿ) 2024ರಲ್ಲಿ ಭಾಗವಹಿಸಲು ಭಾರತದ ಮೂರು ಪ್ರೌಢಶಾಲಾ ವಿದ್ಯಾರ್ಥಿಗಳ ಗುಂಪುಗಳು ಸೇರಿದಂತೆ ಭಾರತೀಯ ವಿದ್ಯಾರ್ಥಿಗಳ ಏಳು ತಂಡಗಳು ಅರ್ಹತೆ ಪಡೆದಿವೆ.
ರೋವರ್ ಚಾಲೆಂಜ್ ಸ್ಪರ್ಧೆಯಲ್ಲಿ ಭಾಗವಹಿಸಲಿರುವ ತಂಡಗಳೆಂದರೆ- ಗೋವಾ ಕ್ಯಾಂಪಸ್ನ ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್-ಪಿಲಾನಿ; ಕ್ಯಾಂಡೋರ್ ಇಂಟರ್ ನ್ಯಾಷನಲ್ ಸ್ಕೂಲ್, ಬೆಂಗಳೂರು; ಕನಕಿಯಾ ಇಂಟರ್ ನ್ಯಾಷನಲ್ ಸ್ಕೂಲ್, ಮುಂಬೈ; ಕೆಐಇಟಿ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ಸ್, ದೆಹಲಿ-ಎನ್ಸಿಆರ್; ಪಂಜಾಬ್ ಎಂಜಿನಿಯರಿಂಗ್ ಕಾಲೇಜು, ಚಂಡೀಗಢ; ವೆಲ್ಲೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಚೆನ್ನೈ ಮತ್ತು ಯಂಗ್ ಮೈಂಡ್ ರಿಸರ್ಚ್ ಅಂಡ್ ಡೆವಲಪ್ಮೆಂಟ್, ಫರಿದಾಬಾದ್.
ಮಾನವ ಚಾಲಿತ ರೋವರ್ ಗಳನ್ನು ನಿರ್ಮಿಸಲು ಎಂಜಿನಿಯರಿಂಗ್ ವಿನ್ಯಾಸದ ಸ್ಪರ್ಧೆಯಲ್ಲಿ ಭಾಗವಹಿಸಲಿರುವ ವಿಶ್ವದಾದ್ಯಂತದ 13 ರಾಷ್ಟ್ರಗಳ 72 ತಂಡಗಳ ಪೈಕಿ ಭಾರತದ 7 ತಂಡಗಳೂ ಸೇರಿವೆ.
2024 ರಲ್ಲಿ ತನ್ನ 30 ನೇ ವಾರ್ಷಿಕೋತ್ಸವ ಆಚರಿಸುತ್ತಿರುವ ಎಚ್ಇಆರ್ಸಿ, ಹ್ಯೂಮನ್ ಎಕ್ಸ್ ಪ್ಲೋರೇಷನ್ ರೋವರ್ ಚಾಲೆಂಜ್ ನಲ್ಲಿ ಚಂದ್ರ ಮತ್ತು ಮಂಗಳನ ಭೂಪ್ರದೇಶವನ್ನು ಅನುಕರಿಸಿ, ಆ ಪ್ರದೇಶಗಳಲ್ಲಿ ಎದುರಾಗಬಹುದಾದ ಅಡೆತಡೆಗಳನ್ನು ನಿವಾರಿಸಲು ಹಗುರವಾದ, ಮಾನವ ಚಾಲಿತ ರೋವರ್ ಗಳನ್ನು ವಿನ್ಯಾಸಗೊಳಿಸಲು, ನಿರ್ಮಿಸಲು ಮತ್ತು ಪರೀಕ್ಷಿಸಲು ವಿದ್ಯಾರ್ಥಿಗಳಿಗೆ ಟಾಸ್ಕ್ಗಳನ್ನು ನೀಡಲಾಗುತ್ತದೆ.
"ಈ ಅಧಿಕೃತ ಕಲಿಕೆಯ ಸವಾಲಿನ ಉದ್ದಕ್ಕೂ ಸಹಯೋಗ, ವಿಚಾರಣೆ ಮತ್ತು ಸಮಸ್ಯೆ-ಪರಿಹರಿಸುವ ತಂತ್ರಗಳ ಬಗ್ಗೆ ತಮ್ಮ ತಿಳುವಳಿಕೆಯನ್ನು ಸುಧಾರಿಸಲು ನಾಸಾ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತದೆ" ಎಂದು ನಾಸಾ ಮಾರ್ಷಲ್ ಸ್ಟೆಮ್ ಎಂಗೇಜಮೆಂಟ್ ಕಚೇರಿಯ ರೋವರ್ ಚಾಲೆಂಜ್ ವಿಭಾಗದ ಮುಖ್ಯಸ್ಥ ವೆಮಿತ್ರಾ ಅಲೆಕ್ಸಾಂಡರ್ ಹೇಳಿದರು.
ಈ ಚಾಲೆಂಜ್ 2024 ರ ಏಪ್ರಿಲ್ 19 ಮತ್ತು 20 ರಂದು ಅಲಬಾಮಾದ ಯುಎಸ್ ರಾಕೆಟ್ ಮತ್ತು ಬಾಹ್ಯಾಕಾಶ ಕೇಂದ್ರದಲ್ಲಿ ನಡೆಯುವ ಕಾರ್ಯಕ್ರಮದೊಂದಿಗೆ ಕೊನೆಗೊಳ್ಳಲಿದೆ. ಈ ಸ್ಪರ್ಧೆಯು ಒಂಬತ್ತು ಆರ್ಟೆಮಿಸ್ ವಿದ್ಯಾರ್ಥಿ ಸವಾಲುಗಳಲ್ಲಿ ಒಂದಾಗಿದೆ ಮತ್ತು ನಾಸಾದ ಆರ್ಟೆಮಿಸ್ ಕಾರ್ಯಕ್ರಮದ ಗುರಿಗಳನ್ನು ಪ್ರತಿಬಿಂಬಿಸುತ್ತದೆ. ಇದು ಚಂದ್ರನ ಮೇಲೆ ಮೊದಲ ಮಹಿಳೆ ಮತ್ತು ವಿಭಿನ್ನ ಜನಾಂಗದ ಮೊದಲ ವ್ಯಕ್ತಿಯನ್ನು ಇಳಿಸುವುದನ್ನು ಒಳಗೊಂಡಿದೆ.
ಎಚ್ಇಆರ್ಸಿ 2023 ರಲ್ಲಿ 11 ವಿದ್ಯಾರ್ಥಿ ತಂಡಗಳು ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದವು. ಭಾರತದ ಹೊಸ ತಂಡಗಳಲ್ಲಿ, ವಿಐಟಿ ಚೆನ್ನೈ, ಬಿಟ್ಸ್ ಪಿಲಾನಿ, ರಾಜಸ್ಥಾನ ಮತ್ತು ಅಮಿಟಿ ನೋಯ್ಡಾ, ಕೆಐಇಟಿ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ಸ್ 2023 ರ ಸ್ಪರ್ಧೆಯಲ್ಲಿ ಕಾಣಿಸಿಕೊಂಡಿವೆ.
ಇದನ್ನೂ ಓದಿ : ಬಾಹ್ಯಾಕಾಶ ತಂತ್ರಜ್ಞಾನ ನಮ್ಮೊಂದಿಗೂ ಹಂಚಿಕೊಳ್ಳಿ ಎಂದಿತ್ತು ಅಮೆರಿಕ: ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್