ಹೈದರಾಬಾದ್: ಭಾಷೆಯು ಸುದ್ದಿಯನ್ನು ಹರಡುವ ಮಾಧ್ಯಮವಾಗಿದೆ. ನಿರ್ದಿಷ್ಟ ಧರ್ಮದ ಆಧಾರದ ಮೇಲೆ ಭಾಷೆಯನ್ನು ನೋಡಿದಾಗ ಅದು ಸುದ್ದಿಯ ವ್ಯಾಪ್ತಿಯನ್ನು ಮಿತಿಗೊಳಿಸುತ್ತದೆ. ಸತ್ಯವನ್ನು ಮರೆಸುತ್ತದೆ. ಮಾಹಿತಿಯನ್ನು ಹಂಚಿಕೊಳ್ಳಲು ಪ್ರಪಂಚದಲ್ಲಿ ಸಾವಿರಾರು ಭಾಷೆಗಳಿವೆ. ಅವುಗಳನ್ನು ಕೇಸರಿ, ಹಸಿರು, ಕೆಂಪು ಬಣ್ಣಗಳಿಗೆ ಹೋಲಿಕೆ ಮಾಡಿದಲ್ಲಿ ಅದು ಸತ್ವ ಕಳೆದುಕೊಳ್ಳಲಿದೆ ಎಂದು ಈಟಿವಿ ಭಾರತ್ ನೆಟ್‌ವರ್ಕ್ ಸಂಪಾದಕ ಬಿಲಾಲ್ ಭಟ್ ಹೇಳಿದ್ದಾರೆ.
ಭಾನುವಾರ ಹೈದರಾಬಾದ್‌ನ ಮೌಲಾನಾ ಆಜಾದ್ ರಾಷ್ಟ್ರೀಯ ಉರ್ದು ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 200 ವರ್ಷಗಳನ್ನು ಪೂರೈಸಿದ ಉರ್ದು ಪತ್ರಿಕೋದ್ಯಮದ ಬಗ್ಗೆ ವಿವರವಾಗಿ ಮಾಹಿತಿ ನೀಡಿದ ಅವರು. ಉರ್ದು ಪತ್ರಿಕೋದ್ಯಮವು ಇತರ ಭಾಷೆಗಳ ಪತ್ರಿಕೋದ್ಯಮವನ್ನು ಹೇಗೆ ಹೋಲುತ್ತದೆ ಎಂಬುದರ ಕುರಿತೂ ಮಾಹಿತಿ ಹಂಚಿಕೊಂಡರು.
ಉರ್ದು ಮುಸ್ಲಿಮರಿಗೆ ಮಾತ್ರವಲ್ಲದೇ ಎಲ್ಲರಿಗೂ ಸೇರಿದ ಭಾಷೆಯಾಗಿದೆ. ಬ್ರಿಟಿಷ್ ಭಾರತದ ರಾಜಧಾನಿಯಾಗಿದ್ದ ಕೋಲ್ಕತ್ತಾದಲ್ಲಿ ದೇಶದ ಮೊದಲ ಉರ್ದು ಪತ್ರಿಕೆ ಆರಂಭವಾಗಿತ್ತು. ನಂತರ, ಪತ್ರಿಕೆ ಆರಂಭಿಸಿದ ಅದೇ ವ್ಯಕ್ತಿ ಹಿಂದಿ ಮತ್ತು ಪರ್ಷಿಯನ್ ಪತ್ರಿಕೆಗಳನ್ನು ಮುನ್ನಡೆಸಿದರು.
ಉರ್ದು ಪತ್ರಿಕೋದ್ಯಮದ ಭವಿಷ್ಯ, ಸವಾಲುಗಳು ಮತ್ತು ಆರ್ಥಿಕ ಸವಾಲುಗಳ ಮತ್ತು ಬಿಜೆಪಿಯ ಮಾಜಿ ಸಂಸದ ಮತ್ತು ಉರ್ದು ಮಾಧ್ಯಮ ಶೃಂಗಸಭೆಯ ಪ್ರತಿನಿಧಿಗಳಲ್ಲಿ ಒಬ್ಬರಾದ ಸ್ವಪನ್ ದಾಸ್‌ಗುಪ್ತ ಅವರು ಚರ್ಚಿಸಿದರು. ಸುದ್ದಿ ಬರವಣಿಗೆಯಲ್ಲಿ ಸ್ಕ್ರಿಪ್ಟ್ ಮುಖ್ಯವೋ ಅಲ್ಲವೋ ಎಂಬ ವಾದ ಮಂಡಿಸಿದರು.
ಕಾರ್ಯಕ್ರಮದಲ್ಲಿ ಯಾರೆಲ್ಲಾ ಭಾಗಿ: 200 ವರ್ಷ ಪೂರೈಸಿದ ಉರ್ದು ಪತ್ರಿಕೋದ್ಯಮದ ಕಾರ್ಯಕ್ರಮದಲ್ಲಿ ಖ್ಯಾತ ಪತ್ರಕರ್ತರಾದ ಸಂಜಯ್ ಕಪೂರ್, ಶ್ರೀನಿವಾಸನ್ ಜೈನ್, ಸತೀಶ್ ಜಾಕೋಬ್, ರಾಹುಲ್ ದೇವ್, ಪಂಕಜ್ ಪಚೂರಿ, ಸುಮೇರಾ ಖಾನ್, ರಾಹುಲ್ ಶ್ರೀವಾಸ್ತವ ಮತ್ತು ಆನಂದ್ ವಿಜಯ್ ಸೇರಿದಂತೆ ದೆಹಲಿ ಪ್ರತಿನಿಧಿಗಳು, ಉರ್ದುವಲ್ಲದೇ ಇತರ ಭಾಷೆಗಳ ಖ್ಯಾತ ಪತ್ರಕರ್ತರು, ಬರಹಗಾರರು, ಶಿಕ್ಷಣ ತಜ್ಞರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಖ್ಯಾತ ಪತ್ರಕರ್ತರ ಅಭಿಪ್ರಾಯ ಮಂಡನೆ: ಉದ್ಘಾಟನಾ ಸಮಾರಂಭದ ಬಳಿಕ ಮಾತನಾಡಿದ ಎನ್‌ಡಿಟಿವಿಯ ಶ್ರೀನಿವಾಸನ್ ಜೈನ್ ಅವರು, ಮಾಧ್ಯಮಗಳು ಶಾಂತಿ ಮತ್ತು ಸಂವಾದವನ್ನು ಹೇಗೆ ನಿಭಾಯಿಸಬಹುದು ಎಂಬ ವಿಷಯದ ಮೇಲೆ ವಾದ ಮಂಡಿಸಿದರು. "ಮಾಧ್ಯಮಗಳು ಶಾಂತಿಯನ್ನು ಉತ್ತೇಜಿಸಲು ಸಾಧ್ಯವಿಲ್ಲ ಎಂದು ಅವರು ಪ್ರತಿಪಾದಿಸಿದರು. ವಿಷಯ ಎಷ್ಟೇ ಅಹಿತಕರವಾಗಿದ್ದರೂ ಸತ್ಯವನ್ನು ಹೇಳುವುದೇ ಮಾಧ್ಯಮಗಳ ಕೆಲಸ" ಎಂದಾಗ ಸಭಿಕರೆಲ್ಲರೂ ಕರತಾಡನ ಮಾಡಿದರು.
ಯುದ್ಧದ ವೇಳೆ ಉಕ್ರೇನಿಯನ್ ಮಹಿಳೆಯರ ಕಷ್ಟಕಾರ್ಪಣ್ಯಗಳ ಬಗ್ಗೆ ಮಾಧ್ಯಮದ ಬೇಜವಾಬ್ದಾರಿ ಪ್ರಸಾರದ ಬಗ್ಗೆ ಹಿಂದಿ ಪತ್ರಕರ್ತರೊಬ್ಬರು ಟೀಕಿಸಿದರು. ಇದು ಕಾರ್ಯಕ್ರಮದ ಬಿಸಿ ಹೆಚ್ಚಿಸಿತ್ತು. ಈ ವೇಳೆ ಕಾರ್ಯಕ್ರಮದ ನಿರೂಪಣೆ ಮಾಡುತ್ತಿದ್ದ TV9 ಭಾರತವರ್ಷ್‌ದ ಸುಮೇರಾ ಖಾನ್ ತಕ್ಷಣವೇ ಮಧ್ಯಪ್ರವೇಶಿಸಿ, ವಿಷಯದ ಬಗ್ಗೆ ಗಮನ ಬೇರೆಡೆ ಸೆಳೆದರು.
ಉಕ್ರೇನಿಯನ್ ಮಹಿಳೆಯರು, ಮಕ್ಕಳ ಸುದ್ದಿ ಪ್ರಸಾರ ಆಯಾ ಮಾಧ್ಯಮಗಳಿಗೆ ಬಿಟ್ಟಿದ್ದಾಗಿದೆ ಎಂದರು. ಈ ವೇಳೆ ಇನ್ನೊಬ್ಬ ನಿರೂಪಕ, ಪಂಕಜ್ ಪಚೂರಿ ಎಂಬುವವರು, ಇದು ಮುಖದ ಮೇಲಿನ ಕಲೆಯೋ, ಕನ್ನಡಿಯ ದೋಷವೋ ಎಂಬುದೇ ಪ್ರಶ್ನೆಯಾಗಿದೆ ಎಂದು ಚಟಾಕಿ ಹಾರಿಸಿದರು. ಆದರೆ ಕೊನೆಯಲ್ಲಿ, ಮಾಧ್ಯಮಗಳು ಶಾಂತಿಯ ಪ್ರಚಾರಕರಾಗಿ ಕಾರ್ಯನಿರ್ವಹಿಸಬೇಕೇ ಅಥವಾ ನೇರವಾಗಿ ಸುದ್ದಿ ಮಾಡಬೇಕೇ ಎಂಬ ತಾರ್ಕಿಕತೆ ಅಂತ್ಯವಾಗದೇ ಉಳಿಯಿತು.
ಓದಿ: 2030ರ ವೇಳೆಗೆ 8.5 ಶತಕೋಟಿಗೆ ಜಗತ್ತಿನ ಜನಸಂಖ್ಯೆ ಹೆಚ್ಚಳದ ನಿರೀಕ್ಷೆ..