ಕೊಡರ್ಮಾ: ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರಕ್ವೊಂದು ಪಲ್ಟಿಯಾದಾಗ ಮತ್ತೊಂದು ಅಕ್ರಮ ಬಯಲಾಗಿದೆ. ಗ್ರಾಮಸ್ಥರು ಅದರಲ್ಲಿ ಅಡಗಿಸಿಟ್ಟಿದ್ದ ಮದ್ಯದ ಬಾಟಲಿಗಳನ್ನು ಲೂಟಿ ಮಾಡಿರುವ ಘಟನೆ ಜಾರ್ಖಂಡ್‌ನ ಕೊಡರ್ಮಾ ಜಿಲ್ಲೆಯಲ್ಲಿ ನಡೆದಿದೆ.
ಮರಳು ತುಂಬಿದ ಲಾರಿಯೊಂದು ಬರಿಯಾರ್ಪುರ- ಝಾಂಜಿ ಮೋರ್ ಪ್ರದೇಶದ ಬಳಿ ಪಲ್ಟಿಯಾಗಿದ್ದು, ಮರಳಿನೊಳಗೆ ಅಡಗಿಸಿಟ್ಟಿದ್ದ ಮದ್ಯದ ಬಾಟಲಿಗಳು ಉರುಳಿಬಿದ್ದಿವೆ. ವಿಚಾರ ತಿಳಿದ ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿ ಬಾಟಲಿಗಳನ್ನು ಲೂಟಿ ಮಾಡಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮರಳನ್ನು ಸಹ ಅಕ್ರಮವಾಗಿ ಸಾಗಿಸುತ್ತಿದ್ದ ಲಾರಿ ಚಾಲಕ ಮತ್ತು ಆತನೊಂದಿಗಿದ್ದ ಮತ್ತೋರ್ವ ವ್ಯಕ್ತಿ ಪರಾರಿಯಾಗಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಲಾರಿ ಚಾಲಕನಿಗಾಗಿ ಹುಡುಕುತ್ತಿದ್ದಾರೆ.