ಬೆಂಗಳೂರು : ಲಾಕ್ಡೌನ್ ಸಮಯದಲ್ಲಿ ಕೆಲಸವಿಲ್ಲದಿದ್ದರಿಂದ ಹಣಕ್ಕಾಗಿ ಆಂಧ್ರಪ್ರದೇಶದಿಂದ ಗಾಂಜಾ ಖರೀದಿ ಮಾಡಿ ನಗರದಲ್ಲಿ ಮಾರಾಟ ಮಾಡುತ್ತಿದ್ದ ಗ್ಯಾಂಗ್‌ನ ಉತ್ತರ ವಿಭಾಗ ಪೊಲೀಸರು ಮಟ್ಟ ಹಾಕುವುದರಲ್ಲಿ ಯಶಸ್ವಿಯಾಗಿದ್ದಾರೆ. ಶಬ್ಬೀರ್ ಖಾನ್, ಭೀಮಣ್ಣ, ನನ್ಮರಾವ್, ಸುರೇಂದ್ರ ಸೂರ್ಯ ಬಂಧಿತರು.
ಈ ಆರೋಪಿಗಳು ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ವಿಚಾರಣೆಗೊಳಪಡಿಸಲಾಗಿತ್ತು.
ಆಗ ಪ್ರಮುಖ ಆರೋಪಿ ಶಬ್ಬಿರ್ ಖಾನ್ ಆಟೋ ಚಾಲಕನಾಗಿದ್ದು, ಲಾಕ್ಡೌನ್ ಸಮಯದಲ್ಲಿ ಕೆಲಸವಿಲ್ಲದಿದ್ದರಿಂದ ಹಣಕ್ಕಾಗಿ ಆಂಧ್ರಪ್ರದೇಶದ ಭೀಮಣ್ಣ ಮತ್ತು ನನ್ನರಾವ್ ಎಂಬುವರಿಂದ ಗಾಂಜಾವನ್ನು ಕಡಿಮೆ ಬೆಲೆಗೆ ಪಡೆದು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಆರೋಪಿಗಳು ಮೂಲತಃ ಆಂಧ್ರದ ವಿಶಾಖಪಟ್ಟಣದವರಾಗಿದ್ದಾರೆ. ಒಡಿಶಾ ರಾಜ್ಯದಿಂದ ಗಾಂಜಾ ಸೊಪ್ಪನ್ನ ಕಡಿಮೆ ಬೆಲೆಗೆ ತೆಗೆದುಕೊಂಡು ಬಂದು ನಗರದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು. ಬಂಧಿತ ಆರೋಪಿಗಳಿಂದ 9.6 ಲಕ್ಷ ಮೌಲ್ಯದ 30.23 ಕೆಜಿ ತೂಕದ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಮತ್ತೋರ್ವ ಆರೋಪಿ ಸುರೇಂದ್ರ ಸೂರ್ಯ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಖಾಲಿ ಜಾಗದಲ್ಲಿ ಗಾಂಜಾ ಮಾರಾಟ ಮಾಡಿ ಹೆಚ್ಚಿನ ಹಣ ಗಳಿಸುತ್ತಿದ್ದ. ಈತ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದು, ಹಣದ ಆಸೆಗೋಸ್ಕರ ಆಂಧ್ರದಿಂದ ಕಡಿಮೆ ಬೆಲೆಗೆ ತಂದು ಇಲ್ಲಿ ಮಾರಾಟ ಮಾಡುತ್ತಿದ್ದ ಎಂಬುದರ ಬಗ್ಗೆ ವಿಚಾರಣೆ ಬಾಯಿಬಿಟ್ಡಿದ್ದಾನೆ. ಸದ್ಯ ಆರೋಪಿಯಿಂದ 4.03 ಕೆಜಿ ತೂಕದ ಗಾಂಜಾ ವಶಪಡಿಸಿಕೊಂಡು ತನಿಖೆ ಮುಂದುವರೆಸಲಾಗಿದೆ.