ಮಂಡ್ಯ: ಬ್ಯಾಂಕ್ ನಲ್ಲಿ ಚಿನ್ನ ಇಟ್ಟರೆ ಹೆಚ್ಚಿನ ಬಡ್ಡಿ ಕೊಡಿಸುವುದಾಗಿ ಮಹಿಳೆಯರನ್ನು ನಂಬಿಸಿ ಕೋಟ್ಯಂತರ ರೂ. ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಫೆಡ್ ಬ್ಯಾಂಕ್‌ನ ನೌಕರ ಸೇರಿದಂತೆ ಮಹಿಳೆಯೊಬ್ಬಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮಂಡ್ಯದ ಫೆಡ್ ಬ್ಯಾಂಕ್ ಎಕ್ಸಿಕ್ಯುಟಿವ್ ಸೋಮಶೇಖರ್ ಎಂಬಾತ ಮಹಿಳೆಯರು ಹಾಗೂ ಮಂಗಳಮುಖಿಯರಿಗೆ ಚಿನ್ನದ ಸಾಲ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವಂಚನೆ ಮಾಡಿ ಪೊಲೀಸರ ವಶದಲ್ಲಿದ್ದಾನೆ.
ನಮ್ಮ ಬ್ಯಾಂಕ್ ನಲ್ಲಿ ಚಿನ್ನ ಅಡವಿಟ್ಟರೆ ವಾರಕ್ಕೆ ಶೇ 20ರಷ್ಟು, ತಿಂಗಳಿಗೆ ಶೇ 40ರಷ್ಟು ಬಡ್ಡಿಯ ಆಮಿಷ ತೋರಿಸಿ ಚಿನ್ನವನ್ನು ಪಡೆಯುತ್ತಿದ್ದ ಎನ್ನಲಾಗಿದೆ. ಪಡೆದ ಚಿನ್ನಕ್ಕೆ ಮೊದಲ ತಿಂಗಳು ಬಡ್ಡಿ ನೀಡಿ ನಂತರ ವಂಚನೆ ಮಾಡುತ್ತಿದ್ದ. ಪ್ರಕರಣ ಸಂಬಂಧ ಮಂಗಳಮುಖಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಹಿನ್ನೆಲೆ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿ ಹಲವು ಮಹಿಳೆಯರ ಬಳಿ ಬಡ್ಡಿಯ ಆಮಿಷ ತೋರಿಸಿ 20 ಕೋಟಿ ರೂಪಾಯಿ ಮೌಲ್ಯದ ಚಿನ್ನವನ್ನು ಪಡೆದುಕೊಂಡಿದ್ದಾನೆ ಎಂದು ಹೇಳಲಾಗಿದೆ. ಮೋಸ ಹೋದವರಲ್ಲಿ ಬಿಜೆಪಿ ಪಕ್ಷದ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಸೇರಿದಂತೆ ಉದ್ಯಮಿ, ರಾಜಕಾರಣಿಗಳ ಪತ್ನಿಯರು ಸೇರಿದ್ದಾರೆ. ಈತನ ಜೊತೆ ಓರ್ವ ಮಹಿಳೆಯೂ ಸೇರಿಕೊಂಡಿದ್ದಾಳೆ ಎಂದು ಹೇಳಲಾಗಿದ್ದು, ಆಕೆಯನ್ನು ವಿಚಾರಣೆ ಮಾಡಲಾಗಿದೆ.
ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಕೆಲವು ಗಿರವಿ ಅಂಗಡಿ ಮಾಲೀಕರನ್ನು ಕರೆದು ವಿಚಾರಣೆ ಮಾಡಿದ್ದಾರೆ. ಗಿರವಿಯಿಟ್ಟ ಹಣದಲ್ಲಿ ಮೊದಲ ತಿಂಗಳ ಬಡ್ಡಿ ನೀಡಿ ಚಿನ್ನ ಕೊಟ್ಟ ಮಹಿಳೆಯರಿಗೆ ಸಮಾಧಾನ ಮಾಡುತ್ತಿದ್ದ. ಇನ್ನು ಚಿನ್ನ ನೀಡಿದ್ದಕ್ಕೆ ಯಾವುದೇ ದಾಖಲೆ ನೀಡದೇ ಬ್ಯಾಂಕ್ ಹಾಗೂ ಮಹಿಳೆಯರಿಗೆ ವಂಚನೆ ಮಾಡಿದ್ದಾನೆ.