ಬೆಂಗಳೂರು: ವಿವಾಹವಾಗಲೆಂದು ಮ್ಯಾಟ್ರಿಮೋನಿಯಲ್ ವೆಬ್ಸೈಟ್ನಲ್ಲಿ ವಧು-ವರರನ್ನು ಹುಡುಕ್ತಿದ್ದೀರಾ? ಹಾಗಾದರೆ ಎಚ್ಚರಿಕೆಯಿಂದಿರಿ. ಮ್ಯಾಟ್ರಿಮೋನಿಯಲ್ನಲ್ಲಿ ನಿಮ್ಮ ಪ್ರೊಫೈಲ್ ನೋಡಿ ಮೋಸ ಮಾಡುವವರು ಬಹಳಷ್ಟು ಮಂದಿ ಇದ್ದಾರೆ. ಬೆಂಗಳೂರಲ್ಲಿ ಇಂತಹದ್ದೇ ಒಂದು ಘಟನೆ ಬೆಳಕಿಗೆ ಬಂದಿದೆ.
ಮನೋಹರ್ (ಹೆಸರು ಬದಲಾಯಿಸಲಾಗಿದೆ) ಎಂಬ ಯುವಕ ಹುಡುಗಿ ಹುಡುಕಲೆಂದು ಮ್ಯಾಟ್ರಿಮೋನಿಯಲ್ ವೆಬ್ಸೈಟ್ನಲ್ಲಿ ತಮ್ಮ ಪ್ರೊಫೈಲ್ ಹಾಕಿದ್ದಾರೆ. ಇದೇ ತಿಂಗಳ 14 ರಂದು 9134620478 ನಂಬರ್ನಿಂದ ಕರೆ ಮಾಡಿ MATCHAPPY.IN ನಿಂದ ಕರೆ ಮಾಡುತ್ತಿದ್ದೇವೆ ಎಂದು ಸೈಬರ್ ವಂಚಕರು ತಿಳಿಸಿದ್ದಾರೆ. ವೆಬ್ಸೈಟ್ ಒಂದರ ಲಿಂಕ್ ಕಳುಹಿಸಿ ಇದಕ್ಕೆ ಲಾಗಿನ್ ಆಗಿ, ಲಾಗಿನ್ ಆಗೋಕೆ ನೀವು 1,080 ರೂ. ಪಾವತಿಸಬೇಕು ಎಂದಿದ್ದಾರೆ.
ಇದಾದ ಬಳಿಕ ನಿಮಗೆ ಹುಡುಗಿ ನೋಡಲು ಆಯ್ಕೆಗಳಿವೆ. ಒಂದು ವೇಳೆ ನಿಮಗೆ ಹುಡುಗಿ ಇಷ್ಟ ಆಗಿ, ಹುಡುಗಿಗೂ ನೀವು ಇಷ್ಟವಾದ್ರೆ 22,800 ರೂ. ಪೇ ಮಾಡಿ ಅಂದಿದ್ದಾರೆ. ಇದಕ್ಕೆ ಮನೋಹರ್ ನಿರಾಕರಿಸಿದ್ದು, ನಿಮ್ಮ ಹಣ ರೀಫಂಡ್ ಆಗುತ್ತೆ ಎಂದು ನಂಬಿಸಿದ್ದಾರೆ. ಇದನ್ನ ನಂಬಿ ಹಣ ಹಾಕಿದಾಗ ಹಂತ ಹಂತವಾಗಿ 62,800 ರೂ. ಕಟ್ ಆಗಿದೆ. ಬಳಿಕ ರೀಫಂಡ್ ಮಾಡಿಲ್ಲ.
ತನಗೆ ಮೋಸವಾಗಿದೆ ಎಂಬುದನ್ನು ಅರಿತ ಮನೋಹರ್ ಈ ಸಂಬಂಧ ಆಗ್ನೇಯ ವಿಭಾಗದ ಸೈಬರ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.