ಹರಿಯಾಣ: ಕಳೆದ ನಾಲ್ಕು ವರ್ಷಗಳಲ್ಲಿ ಹೆತ್ತ ತಂದೆಯೇ ತನ್ನ ಐವರು ಮಕ್ಕಳನ್ನು ಕೊಲೆ ಮಾಡಿರುವ ಘಟನೆಯೊಂದು ಹರಿಯಾಣದ ಜಿಂದ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಇಬ್ಬರು ಹೆಣ್ಣು ಮಕ್ಕಳ ಕೊಲೆ ಆರೋಪದ ಮೇಲೆ ದಿದ್ವಾರಾ ಗ್ರಾಮದ ನಿವಾಸಿ ಆರೋಪಿ ಜುಮ್ಮಾ ದಿನ್ನನ್ನು ಪೊಲೀಸರು ಬಂಧಿಸಿದ್ದರು. ವಿಚಾರಣೆ ವೇಳೆ ಆತ ಈ ಹಿಂದೆ ತನ್ನ ಮೂವರು ಮಕ್ಕಳನ್ನು ಸಾಯಿಸಿರುವುದನ್ನೂ ಸಹ ಬಾಯ್ಬಿಟ್ಟಿದ್ದಾನೆ.
ಜುಲೈ 16ರಂದು 7 ವರ್ಷ ಮತ್ತು 10 ವರ್ಷದ ಇಬ್ಬರು ಬಾಲಕಿಯರು ನಾಪತ್ತೆಯಾಗಿದ್ದರು. ಮೂರು ದಿನಗಳ ಶೋಧದ ಬಳಿಕ ಪೊಲೀಸರು ಹನ್ಸಿ ಶಾಖೆ ಕಾಲುವೆಯಲ್ಲಿ ಮೃತದೇಹಗಳನ್ನು ಪತ್ತೆ ಮಾಡಿದ್ದರು. ತನಿಖೆಯಲ್ಲಿ ಹೆಣ್ಣು ಮಕ್ಕಳ ತಂದೆಯೇ ಕೊಲೆ ಮಾಡಿರುವುದು ತಿಳಿದು ಬಂದಿದೆ. ಅಲ್ಲದೇ ಈ ಹಿಂದೆ ಮೃತಪಟ್ಟ ಮೂವರು ಮಕ್ಕಳನ್ನು ಕೊಂದಿದ್ದೂ ತಾನೇ ಎಂಬುದನ್ನು ಒಪ್ಪಿಕೊಂಡಿದ್ದಾನೆ ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಅಜಿತ್ ಸಿಂಗ್ ಶೇಖಾವತ್ ತಿಳಿಸಿದ್ದಾರೆ.
ಐವರು ಮಕ್ಕಳನ್ನು ಕೊಂದ ಈತ ಸಾಯುವುದೇ ಲೇಸು ಎಂದು ಆರೋಪಿಯ ಪತ್ನಿ ರೀನಾ ಹಿಡಿಶಾಪ ಹಾಕಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿರುವ ಪೊಲೀಸರು, ಹತ್ಯೆಯಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂದು ತನಿಖೆ ಮುಂದುವರೆಸಿದ್ದಾರೆ.