ಲಖನೌ: ಗ್ಯಾಂಗ್ಸ್ಟರ್ ಕಮ್ ರಾಜಕಾರಣಿ ಮುಖ್ತಾರ್ ಅನ್ಸಾರಿಯ ಅಕ್ರಮ ಆಸ್ತಿಯನ್ನು ನೆಲಸಮ ಮಾಡಲಾಗಿದೆ ಎಂದು ಲಖನೌ ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಲಖನೌ ನಗರದ ದಲಿಬಾಗ್ ಕಾಲೋನಿ ಬಳಿ ಇದ್ದ ಅನ್ಸಾರಿಯ ಮನೆಯನ್ನು ಜೆಸಿಬಿ ಬಳಸಿ ನೆಲಸಮ ಮಾಡಲಾಗಿದ್ದು, ಇದರ ವೆಚ್ಚವನ್ನು ಸಹ ಅನ್ಸಾರಿಯಿಂದಲೇ ವಸೂಲಿ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮುಖ್ತಾರ್ ಅನ್ಸಾರಿ, 2005ರಲ್ಲಿ ನಡೆದ ಮೊಹಮ್ಮದಾಬಾದ್ ಕ್ಷೇತ್ರದ ಬಿಜೆಪಿ ಶಾಸಕ ಕೃಷ್ಣಾನಂದ ರಾಯ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಪ್ರಸ್ತುತ ಜೈಲುವಾಸ ಅನುಭವಿಸುತ್ತಿದ್ದಾರೆ.
ಕಳೆದ ಜುಲೈನಲ್ಲಿ ಉತ್ತರ ಪ್ರದೇಶ ಪೊಲೀಸರು ಅನ್ಸಾರಿಯ ನಾಲ್ವರು ಬಂಟರ ಶಸ್ತ್ರಾಸ್ತ್ರ ಪರವಾನಗಿಯನ್ನು ರದ್ದುಗೊಳಿಸಿದ್ದರು. ಅಲ್ಲದೇ ಅನ್ಸಾರಿ ಪುತ್ರ ಅಬ್ಬಾಸ್ ಅನ್ಸಾರಿ ನಿವಾಸದಲ್ಲಿದ್ದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿದ್ದರು.