ಹಥ್ರಾಸ್ (ಉತ್ತರ ಪ್ರದೇಶ): ಸೆಪ್ಟೆಂಬರ್ 14 ಅಂದರೆ ಹಥ್ರಾಸ್ ಸಂತ್ರಸ್ತೆಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದ ದಿನದ ಸಿಸಿಟಿವಿ ದೃಶ್ಯಾವಳಿಗಳು ಆಸ್ಪತ್ರೆಯಿಂದ ನಾಪತ್ತೆಯಾಗಿವೆ ಎಂಬುದು ಸಿಬಿಐ ತನಿಖೆ ವೇಳೆ ಬಯಲಾಗಿದೆ.
ಉತ್ತರ ಪ್ರದೇಶದ ಹಥ್ರಾಸ್ನಲ್ಲಿ ದಲಿತ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಬಳಿಕ ಆಕೆಯನ್ನು ಹಥ್ರಾಸ್ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ನಂತರ ಯುವತಿ ಇಲ್ಲಿ ಮೃತಪಟ್ಟಿದ್ದಳು. ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ನಿನ್ನೆ ಆಸ್ಪತ್ರೆಗೆ ಭೇಟಿ ನೀಡಿದ್ದರು. ಸಂತ್ರಸ್ತ ಯುವತಿಗೆ ಚಿಕಿತ್ಸೆ ನೀಡಿದ ದಾಖಲೆಗಳನ್ನು ಪರಿಶೀಲನೆ ಮಾಡಿ, ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿದ್ದರು.
ಸಾಕ್ಷ್ಯಗಳ ಪರಿಶೀಲನೆ ವೇಳೆ ಸೆ. 14ರ ಆಸ್ಪತ್ರೆಯ ಸಿಸಿಟಿವಿ ದೃಶ್ಯಾವಳಿಗಳು ಡಿಲಿಟ್ ಆಗಿರುವುದು ತಿಳಿದು ಬಂದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕ ಇಂದ್ರ ವೀರ್ ಸಿಂಗ್, "ಪ್ರತಿ ಏಳು ದಿನಗಳಿಗೊಮ್ಮೆ ಹಿಂದಿನ ಸಿಸಿಟಿವಿ ದೃಶ್ಯದ ತುಣುಕನ್ನು ಅಳಿಸಲಾಗುತ್ತದೆ. ಅವಶ್ಯಕತೆ ಇದ್ದರೆ ಮಾತ್ರ ಬ್ಯಾಕ್‌ಅಪ್ ಇಡುತ್ತೇವೆ. ಪೊಲೀಸರು ಕೇಳಿದ್ದರೆ ಅದನ್ನು ಸೇವ್ ಮಾಡಿಕೊಳ್ಳುತ್ತಿದ್ದೆವು" ಎಂದು ಹೇಳಿದ್ದಾರೆ.
ಮಂಗಳವಾರ ಮೃತ ಸಂತ್ರಸ್ತೆಯ ಗ್ರಾಮಕ್ಕೆ ಭೇಟಿ ನೀಡಿದ್ದ ಸಿಬಿಐ ಅಧಿಕಾರಿಗಳು, ಇಂದು ಆರೋಪಿಗಳ ಕುಟುಂಬಸ್ಥರ ಭೇಟಿಗೆ ಬಂದಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲೂ ಕೂಡ ಹೀಗೆಯೇ ಆಗಿತ್ತು. ಮುಂಬೈನ ಕೂಪರ್ ಆಸ್ಪತ್ರೆಯಿಂದ ಕೂಡ ಸಿಸಿಟಿವಿ ದೃಶ್ಯಾವಳಿಗಳು ಮಾಯವಾಗಿದ್ದವು.