ಪುತ್ತೂರು: ಅಂಗಡಿಗಳ ಲಾಕ್ ತೆಗೆದು ಬೈಕ್ ಹಾಗೂ ತೂಕದ ಯಂತ್ರ ಕಳವು ಮಾಡುತ್ತಿದ್ದ ಆರೋಪಿಯನ್ನು ಪುತ್ತೂರು ಪೊಲೀಸರು ಬೆದ್ರಾಳ ಎಂಬಲ್ಲಿ ಬಂಧಿಸಿದ್ದಾರೆ.
ನೌಶದ್ ಯಾನೇ ನೌಫಲ್ ಬಂಧಿತ ಆರೋಪಿ. ಮೂಲತಃ ಕುಶಾಲನಗರ ನಿವಾಸಿಯಾಗಿದ್ದ ಈತ ಪುತ್ತೂರು ಬೆದ್ರಾಳದಲ್ಲಿನ ಸಂಬಂಧಿಕರ ಮನೆಗೆ ಬಂದಿದ್ದ. ಲಾಕ್ ಡೌನ್ ಆಗಿದ್ದರಿಂದ ಇಲ್ಲಿಯೇ ಉಳಿದಿದ್ದ ಈತ ಮನೆಯಲ್ಲಿ ಕುಳಿತುಕೊಳ್ಳದೇ ತನ್ನ ಕೈಚಳಕದಿಂದ ಪುತ್ತೂರಿನ ಮುಕ್ರಂಪಾಡಿ ಸಂಜಯ ನಗರದ ಕಾರ್ ಶೆಡ್ನಲ್ಲಿ ನಿಲ್ಲಿಸಿದ್ದ ಬೈಕ್ ಹಾಗೂ ತಾರಿಗುಡ್ಡೆ ಇಬ್ರಾಹಿಂ ಅವರಿಗೆ ಸೇರಿದ ಮುಕ್ರಂಪಾಡಿ ತರಕಾರಿ ಅಂಗಡಿಯಿಂದ 3 ತೂಕದ ಯಂತ್ರಗಳನ್ನು ಕದ್ದಿದ್ದ ಎನ್ನಲಾಗಿದೆ. ಈ ಸಂಬಂಧ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದರು.
ದೂರಿನ ಅನ್ವಯ ಪುತ್ತೂರು ನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ಆತನಿಂದ ಬೈಕ್ ಮತ್ತು ಮೂರು ತೂಕದ ಸ್ಕೇಲ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೋರ್ವ ಆರೋಪಿ ಭಾಗಿಯಾಗಿದ್ದು, ಆತನ ಪತ್ತೆಗಾಗಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.