ಕೊಲಂಬೊ(ಶ್ರೀಲಂಕಾ): ಶ್ರೀಲಂಕಾದಲ್ಲಿ ಗಂಭೀರ ಆರ್ಥಿಕ ಬಿಕ್ಕಟ್ಟಿನ ನಡುವೆ ಅಲ್ಲಿಂದ ದೊಡ್ಡ ಸುದ್ದಿ ಹೊರಬಿದ್ದಿದೆ. ಅಧ್ಯಕ್ಷ ಗೊಟಬಯ ರಾಜಪಕ್ಸ ದೇಶದಿಂದ ಪಲಾಯನ ಮಾಡಿ ಮಾಲ್ಡಿವ್ಸ್‌ಗೆ ಬಂದಿಳಿದಿದ್ದಾರೆ. ಈಗಾಗಲೇ ಅಧ್ಯಕ್ಷ ಸ್ಥಾನಕ್ಕೆ ನೀಡಿರುವ ರಾಜೀನಾಮೆ ಪತ್ರಕ್ಕೆ ರಾಜಪಕ್ಸ ಸಹಿ ಹಾಕಿದ್ದು, ಇಂದು ಸ್ಪೀಕರ್ ಅಧಿಕೃತವಾಗಿ ಪ್ರಕಟಿಸಲಿದ್ದಾರೆ.
ರಾಜಪಕ್ಸ ಅವರು ಪತ್ನಿ, ಅಂಗರಕ್ಷಕರೊಂದಿಗೆ ಮಾಲ್ಡೀವ್ಸ್‌ನ ಮಾಲೆ ನಗರ ತಲುಪಿದ್ದಾರೆ ಎಂದು ತಿಳಿದು ಬಂದಿದೆ. ಲಂಕಾದಿಂದ ತಪ್ಪಿಸಿಕೊಳ್ಳಲು ಅವರು ವಾಯುಪಡೆಯ ಎಎನ್-32 ಬಳಸಿದ್ದಾರೆ. ಪ್ರತಿಭಟನಾಕಾರರು ಮುತ್ತಿಗೆ ಸಂದರ್ಭದಲ್ಲಿ ಇವರು ಶ್ರೀಲಂಕಾದಲ್ಲೇ ತಲೆಮರೆಸಿಕೊಂಡಿದ್ದರು. ಇದೀಗ ದೇಶದಿಂದಲೇ ಕಾಲ್ಕಿತ್ತಿದ್ದಾರೆ.
ಸ್ಪೀಕರ್‌ಗೆ ಅಧ್ಯಕ್ಷ ಪಟ್ಟ?: ರಾಜಪಕ್ಸ ರಾಜೀನಾಮೆಯ ನಂತರ ಅಧ್ಯಕ್ಷ ಸ್ಥಾನ ಈಗ ಸಂಸತ್ತಿನ ಸ್ಪೀಕರ್ ಮಹಿಂದಾ ಯಾಪಾ ಅಭಯವರ್ಧನ ಅವರ ಪಾಲಾಗಲಿದೆ ಎಂದು ಹೇಳಲಾಗುತ್ತಿದೆ. ಸಂವಿಧಾನದ ಪ್ರಕಾರ, ದೇಶದಲ್ಲಿ ಅಧ್ಯಕ್ಷ ಮತ್ತು ಪ್ರಧಾನಮಂತ್ರಿಯ ಅನುಪಸ್ಥಿತಿಯಲ್ಲಿ ಸರ್ಕಾರದ ನೇತೃತ್ವವನ್ನು ಸಂಸತ್ತಿನ ಸ್ಪೀಕರ್‌ಗೆ ನೀಡಬೇಕಿದೆ.
ಇದನ್ನೂ ಓದಿ: ಲಂಕಾ ಪಿಎಂ ರಾಜೀನಾಮೆ ಬೆನ್ನಲ್ಲೇ ಭುಗಿಲೆದ್ದ ಹಿಂಸಾಚಾರ: ಸಂಸದ ಸಾವು, ಮಾಜಿ ಸಚಿವರ ಮನೆಗೆ ಬೆಂಕಿ
ಅಧ್ಯಕ್ಷರ ನಿವಾಸದ ಸುತ್ತಲೂ ಸಾವಿರಾರು ಜನ: ರಾಜಪಕ್ಸ ಪರಾರಿಯಾದ ಹೊರತಾಗಿಯೂ ಸಾವಿರಾರು ಜನರು ಇನ್ನೂ ಅಧ್ಯಕ್ಷರ ನಿವಾಸ ಹಾಗು ಸಂಸತ್ತನ್ನು ಸುತ್ತುವರೆದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.