ಕೊಲಂಬೊ : ತೀವ್ರ ಆರ್ಥಿಕ ಸಂಕಷ್ಟದಿಂದ ಪರದಾಡುತ್ತಿರುವ ನೆರೆರಾಷ್ಟ್ರ ಶ್ರೀಲಂಕಾಗೆ ಭಾರತವು 65 ಕೋಟಿ 35 ಲಕ್ಷ ರೂಪಾಯಿಯಷ್ಟು ಬೃಹತ್ ಮೊತ್ತದ ಮಾನವೀಯ ನೆರವಿನ ಸರಕನ್ನು ಶುಕ್ರವಾರ ಹಸ್ತಾಂತರಿಸಿದೆ. ಶ್ರೀಲಂಕಾದಲ್ಲಿ ಭಾರತೀಯ ಹೈಕಮಿಷನರ್ ಗೋಪಾಲ ಬಾಗ್ಲೆ, ಶ್ರೀಲಂಕಾ ಆರೋಗ್ಯ ಮಂತ್ರಿ ಕೆಹೆಲಿಯಾ ರಾಮಬುಕವೆಲ್ಲಾ, ವಾಣಿಜ್ಯ ಮಂತ್ರಿ ನಲಿನ ಹಾಗೂ ಹಲವಾರು ಸಂಸತ್ ಸದಸ್ಯರು ಸರಕು ಬರಮಾಡಿಕೊಂಡರು.
ಭಾರತೀಯ ಪ್ರಜೆಗಳು ದೇಣಿಗೆಯಾಗಿ ನೀಡಿದ 14,700 ಮೆಟ್ರಕ್ ಟನ್ ಅಕ್ಕಿ, 250 ಮೆಟ್ರಿಕ್ ಟನ್ ಹಾಲಿನ ಪುಡಿ ಮತ್ತು 38 ಮೆಟ್ರಿಕ್ ಟನ್ ಔಷಧ ವಸ್ತುಗಳು ನೆರವಿನ ಸರಕಿನಲ್ಲಿ ಸೇರಿವೆ. ಶ್ರೀಲಂಕಾಗೆ ಭಾರತ ನೀಡಿದ ಬೃಹತ್ ಪ್ರಮಾಣದ ಮಾನವೀಯ ನೆರವು ಎರಡೂ ದೇಶಗಳ ಜನರ ಮಧ್ಯದ ಭ್ರಾತೃತ್ವಕ್ಕೆ ಸಾಕ್ಷಿಯಾಗಿದೆ.
ಶ್ರೀಲಂಕಾದ ಜನತೆ ಯಾವಾಗಲೂ ನೆಮ್ಮದಿಯಿಂದ ಇರಬೇಕೆಂಬುದು ಭಾರತದ ಜನತೆಯ ಬಯಕೆಯಾಗಿದೆ ಎಂದು ಭಾರತೀಯ ಹೈಕಮಿಷನ್ ಪ್ರಕಟಣೆಯಲ್ಲಿ ತಿಳಿಸಿದೆ. ನೆರವಿನ ಈ ಸರಕುಗಳನ್ನು ಅಗತ್ಯವಿದ್ದವರಿಗೆ ಶ್ರೀಲಂಕಾ ಸರ್ಕಾರ ಹಸ್ತಾಂತರಿಸಲಿದೆ ಎಂದು ಪ್ರಕಟಣೆ ಹೇಳಿದೆ.
ಭಾರತದ ವಿದೇಶಾಂಗ ಕಾರ್ಯದರ್ಶಿ ವಿನಯ ಕ್ವಾಟ್ರಾ ನೇತೃತ್ವದ ಉನ್ನತ ಮಟ್ಟದ ನಿಯೋಗವು ಶ್ರೀಲಂಕಾದ ಉನ್ನತ ಅಧಿಕಾರಿಗಳು ಸೇರಿದಂತೆ ಅಧ್ಯಕ್ಷ ಗೊಟಾಬಾಯಾ ರಾಜಪಕ್ಷಾ ಹಾಗೂ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರನ್ನು ಭೇಟಿ ಮಾಡಿ ಚರ್ಚಿಸಿದ ನಂತರ ಈ ಮಾನವೀಯ ನೆರವನ್ನು ಶ್ರೀಲಂಕಾಗೆ ನೀಡಲಾಗಿದೆ.