ಕೊಲಂಬೊ (ಶ್ರೀಲಂಕಾ): ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಶ್ರೀಲಂಕಾದಲ್ಲಿ ಜಾರಿಗೆ ತಂದಿದ್ದ ತುರ್ತು ಪರಿಸ್ಥಿತಿಯನ್ನು ಹಿಂಪಡೆಯಲಾಗಿದೆ. ಇದೇ ವೇಳೆ ಅಧ್ಯಕ್ಷ ಗೊಟಬಯ ರಾಜಪಕ್ಸ ಯಾವುದೇ ಕಾರಣಕ್ಕೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಸರ್ಕಾರ ಪುರುಚ್ಚರಿಸಿದೆ. ಸರ್ಕಾರದ ಮುಖ್ಯ ವಿಪ್ ಹಾಗು ಹೆದ್ದಾರಿ ಖಾತೆ ಸಚಿವ ಜಾನ್ಸ್ಟನ್ ಫೆರ್ನಾಂಡೋ ಈ ವಿಚಾರವಾಗಿ ಇಂದು ಮಾತನಾಡಿದರು.
ದ್ವೀಪರಾಷ್ಟ್ರವು ಆರ್ಥಿಕ ದಿವಾಳಿಯಾಗಿದೆ. ಅಗತ್ಯ ವಸ್ತುಗಳಿಗೆ ನಾಗರಿಕರು ಇನ್ನಿಲ್ಲದ ತೊಂದರೆ ಅನುಭವಿಸುತ್ತಿದ್ದಾರೆ. ಪರಿಣಾಮ, ರಸ್ತೆಗಿಳಿದು ಸಾವಿರಾರು ಜನರು ಪ್ರತಿಭಟನೆ ನಡೆಸಿದ್ದು ಹಿಂಸಾಚಾರವೂ ನಡೆದಿತ್ತು. ಹೀಗಾಗಿ ಏ.1ರಂದು ತುರ್ತು ಪರಿಸ್ಥಿತಿ ಜಾರಿಗೊಳಿಸಿ ಅಧ್ಯಕ್ಷ ಗೊಟಬಯ ರಾಜಪಕ್ಸ ಆದೇಶಿಸಿದ್ದರು. ಇದೀಗ ಇದನ್ನು ಹಿಂಪಡೆದು ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದೆ.
ಸಂಸತ್ತಿನಲ್ಲಿ ರಾಜಪಕ್ಸ ಸಾರಥ್ಯದ ಆಡಳಿತಾರೂಢ ಶ್ರೀಲಂಕಾ ಪೊದುಜನ ಪೆರಮುನಾ ಪಕ್ಷ (ಎಸ್‌ಎಲ್‌ಪಿಪಿ) ಬಹುಮತ ಕಳೆದುಕೊಂಡಿದೆ. ಆದರೂ, ಅಧ್ಯಕ್ಷರು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎಂದು ಸರ್ಕಾರದ ಮುಖ್ಯ ವಿಪ್ ಆಗಿರುವ ಹೆದ್ದಾರಿ ಖಾತೆ ಸಚಿವ ಜಾನ್ಸ್ಟನ್ ಫೆರ್ನಾಂಡೋ ಬುಧವಾರ ಹೇಳಿದ್ದಾರೆ.
'ರಾಜಪಕ್ಸ ಅವರಿಗೆ 6.9 ಮಿಲಿಯನ್ ಜನರು ಮತ ಹಾಕಿದ್ದಾರೆ. ಈ ವಿಚಾರವನ್ನು ನಾನು ಸರ್ಕಾರದ ಭಾಗವಾಗಿ ಸ್ಪಷ್ಟಪಡಿಸುತ್ತಿದ್ದೇನೆ. ಯಾವುದೇ ಪರಿಸ್ಥಿತಿಯಲ್ಲೂ ಅಧ್ಯಕ್ಷರು ರಾಜೀನಾಮೆ ನೀಡುವುದಿಲ್ಲ. ಏನೇ ಆದರೂ ನಾವು ಅದನ್ನು ಎದುರಿಸುತ್ತೇವೆ' ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: 'ಲಿಖಿತ ಒಪ್ಪಂದ'ದ ನಂತರವೇ ಪುಟಿನ್-ಝೆಲೆನ್ಸ್ಕಿ ಭೇಟಿ ಸಾಧ್ಯ: ಕ್ರೆಮ್ಲಿನ್ ವಕ್ತಾರ