ಕಾಬೂಲ್ (ಅಫ್ಘಾನಿಸ್ತಾನ): ಅಫ್ಘಾನ್ ನಿರಾಶ್ರಿತರನ್ನು ಹೊರಹಾಕುವ ಗಡುವು ಸಮೀಪಿಸುತ್ತಿದ್ದಂತೆ, 8,000 ಕ್ಕೂ ಹೆಚ್ಚು ಅಫ್ಘಾನ್ ವಲಸಿಗರನ್ನು ಪಾಕಿಸ್ತಾನದಿಂದ ಬಲವಂತವಾಗಿ ಗಡೀಪಾರು ಮಾಡಲಾಗಿದೆ ಎಂದು ಖಾಮಾ ಪ್ರೆಸ್ ವರದಿ ಮಾಡಿದೆ. ಶನಿವಾರ ಸುಮಾರು 7,910 ಅಫ್ಘಾನ್ ವಲಸಿಗರು ಪಾಕಿಸ್ತಾನದಿಂದ ಸ್ಪಿನ್ ಬೋಲ್ಡಾಕ್ ಗಡಿ ಮೂಲಕ ತಮ್ಮ ದೇಶಕ್ಕೆ ಮರಳಿದ್ದಾರೆ ಎಂದು ತಾಲಿಬಾನ್ ನೇತೃತ್ವದ ಅಫ್ಘಾನಿಸ್ತಾನ ಸರ್ಕಾರದ ನಿರಾಶ್ರಿತರು ಮತ್ತು ವಾಪಸಾತಿ ಸಚಿವಾಲಯ ಘೋಷಿಸಿದೆ.
ಕಂದಹಾರ್ ಪ್ರಾಂತ್ಯದಲ್ಲಿರುವ ಸ್ಪಿನ್ ಬೋಲ್ಡಾಕ್ನಲ್ಲಿ ತಾಲಿಬಾನ್ ನೇಮಿಸಿದ ಗಡಿ ಅಧಿಕಾರಿಯ ಪ್ರಕಾರ, ಈ ಹಿಂದೆ ಪಾಕಿಸ್ತಾನದ ಜೈಲುಗಳಲ್ಲಿದ್ದ 110 ಕೈದಿಗಳು ಸೇರಿದಂತೆ 7,800 ವ್ಯಕ್ತಿಗಳನ್ನು ಒಳಗೊಂಡ ಒಟ್ಟು 1,330 ಕುಟುಂಬಗಳನ್ನು ಬಿಡುಗಡೆ ಮಾಡಲಾಗಿದೆ. ಇದಲ್ಲದೆ, ಪಾಕಿಸ್ತಾನವು ಅಫ್ಘಾನಿಸ್ತಾನಕ್ಕೆ ವಾಪಸ್ ಕಳುಹಿಸಿದ ಈ ಬಂಧಿತರನ್ನು ಈಗ ಅಧಿಕೃತವಾಗಿ ವಲಸಿಗ ಸಚಿವಾಲಯದಲ್ಲಿ ನೋಂದಾಯಿಸಲಾಗಿದೆ ಎಂದು ತಾಲಿಬಾನ್ ನೇತೃತ್ವದ ಸಚಿವಾಲಯ ತಿಳಿಸಿದೆ. ಅವರಿಗೆ ಅಗತ್ಯವಾದ ನೆರವು ಪಡೆಯಲು ಸಾಧ್ಯವಾಗುವಂತೆ ಅವರನ್ನು ವಿಶ್ವಸಂಸ್ಥೆಯ ನಿರಾಶ್ರಿತರ ಹೈಕಮಿಷನರ್ (ಯುಎನ್ಎಚ್ಸಿಆರ್) ಮತ್ತು ಅಂತರರಾಷ್ಟ್ರೀಯ ವಲಸೆ ಸಂಸ್ಥೆ (ಐಒಎಂ) ಯೊಂದಿಗೆ ಸಂಪರ್ಕಿಸಲಾಗಿದೆ.
ಅಫ್ಘಾನ್ ನಿರಾಶ್ರಿತರ ಬಗ್ಗೆ ಇತ್ತೀಚೆಗೆ ಮಾತನಾಡಿದ ಪಾಕಿಸ್ತಾನದ ಆಂತರಿಕ ಸಚಿವ ಸರ್ಫರಾಜ್ ಬುಗ್ತಿ, ನಿರಾಶ್ರಿತರು ಮರಳುವ ಗಡುವು ವಿಸ್ತರಿಸುವ ಯಾವುದೇ ಯೋಜನೆ ಸರ್ಕಾರಕ್ಕೆ ಇಲ್ಲ ಎಂದು ಹೇಳಿದರು. "ಪಾಕಿಸ್ತಾನದಲ್ಲಿರುವ ಅಕ್ರಮ ನಿವಾಸಿಗಳನ್ನು ಹೊರಹಾಕುವ ಬಗ್ಗೆ ನಾವು ಹೇಳಿದ್ದೇವೆ. ಆದರೆ ಕೇವಲ ಅಫ್ಘಾನಿಸ್ತಾನದವರನ್ನು ಮಾತ್ರ ಹೊರ ಹಾಕಲಾಗುತ್ತಿದೆ ಎಂಬಂತೆ ಇದನ್ನು ಬಿಂಬಿಸಲಾಗುತ್ತಿದೆ. ಸರ್ಕಾರದ ಆದೇಶ ಎಲ್ಲ ಅಕ್ರಮ ವಲಸಿಗರಿಗೆ ಅನ್ವಯಿಸುತ್ತದೆ, ಕೇವಲ ಆಫ್ಘನ್ನರಿಗೆ ಮಾತ್ರವಲ್ಲ" ಎಂದು ಅವರು ಸ್ಪಷ್ಟ ಪಡಿಸಿದರು.
ದೇಶದಲ್ಲಿ ವಾಸಿಸುತ್ತಿರುವ ಅಕ್ರಮ ವಲಸಿಗರನ್ನು ಗಡೀಪಾರು ಮಾಡುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ವಿವಿಧ ರಾಷ್ಟ್ರಗಳಿಂದ ಒತ್ತಡ ಎದುರಿಸುತ್ತಿದ್ದರೂ, ಪಾಕಿಸ್ತಾನ ಈ ವಿಷಯದಲ್ಲಿ ದೃಢನಿಶ್ಚಯ ಮಾಡಿದ್ದು, ತನ್ನ ನಿಲುವನ್ನು ಬದಲಾಯಿಸಲು ಸಿದ್ಧವಿಲ್ಲ ಎಂದು ಪಾಕಿಸ್ತಾನ ಮೂಲದ ದಿ ಎಕ್ಸ್ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ. ಪಾಕಿಸ್ತಾನವು ಅಂದಾಜು 1.7 ಮಿಲಿಯನ್ ವಿದೇಶಿ ಪ್ರಜೆಗಳನ್ನು, ಅದರಲ್ಲೂ ಮುಖ್ಯವಾಗಿ ಅಕ್ರಮವಾಗಿ ವಾಸಿಸುತ್ತಿರುವ ಅಫ್ಘಾನಿಗಳನ್ನು ಹೊರಹಾಕುವ ನಿರ್ಧಾರ ತೆಗೆದುಕೊಂಡಿದೆ. ಅಕ್ಟೋಬರ್ 31ರೊಳಗೆ ಅಕ್ರಮ ವಲಸಿಗರು ದೇಶ ತೊರೆಯದಿದ್ದರೆ ಅವರನ್ನು ಬಲವಂತವಾಗಿ ಹೊರಹಾಕಲಾಗುವುದು ಎಂದು ಪಾಕಿಸ್ತಾನ ಸರ್ಕಾರ ಹೇಳಿದೆ.
ಇದನ್ನೂ ಓದಿ : ಗಾಜಾ ಕೆಳಗಿದೆ ಸುರಂಗ ಜಾಲ; ಇಸ್ರೇಲ್ಗೆ ಸವಾಲಾದ 'ಹಮಾಸ್ ಮೆಟ್ರೊ'