ಇಸ್ಲಾಮಾಬಾದ್: ಸುಮಾರು 1.4 ಮಿಲಿಯನ್ ಅಫ್ಘಾನ್ ನಿರಾಶ್ರಿತರಿಗೆ ಕಾನೂನುಬದ್ಧ ನಿವಾಸ ಸ್ಥಾನಮಾನವನ್ನು ವರ್ಷದ ಅಂತ್ಯದವರೆಗೆ ವಿಸ್ತರಿಸುವುದಾಗಿ ಪಾಕಿಸ್ತಾನ ಶುಕ್ರವಾರ ಘೋಷಿಸಿದೆ. ನಾಲ್ಕು ತಿಂಗಳ ವಿಳಂಬದ ನಂತರ ಪಾಕಿಸ್ತಾನ ಈ ಕ್ರಮ ಕೈಗೊಂಡಿದೆ. ಆದಾಗ್ಯೂ, ದಾಖಲೆರಹಿತವಾಗಿ ವಾಸಿಸುತ್ತಿರುವ ಆಫ್ಘನ್ನರು ಮತ್ತು ಇತರ ವಿದೇಶಿ ಪ್ರಜೆಗಳ ಗಡಿಪಾರು ನಿಲ್ಲಿಸುವುದಿಲ್ಲ ಎಂದು ಪಾಕ್ ಸರ್ಕಾರ ಸ್ಪಷ್ಟ ಪಡಿಸಿದೆ.
ನೋಂದಾಯಿತ ಅಫ್ಘಾನ್ ನಿರಾಶ್ರಿತರಿಗೆ ನೀಡಲಾದ ನೋಂದಣಿ ಪುರಾವೆ ಅಥವಾ ಪಿಒಆರ್ ಕಾರ್ಡ್ಗಳ ಸಿಂಧುತ್ವವನ್ನು ಡಿಸೆಂಬರ್ 31, 2023 ರವರೆಗೆ ವಿಸ್ತರಿಸಲಾಗಿದೆ ಎಂದು ಪಾಕಿಸ್ತಾನ ಸರ್ಕಾರ ಹೇಳಿದೆ. ಪಾಕಿಸ್ತಾನದಲ್ಲಿರುವ ವಿಶ್ವಸಂಸ್ಥೆಯ ನಿರಾಶ್ರಿತರ ಹೈಕಮಿಷನರ್ ಸರ್ಕಾರದ ನಿರ್ಧಾರದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದೆ.
ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಸಂಘರ್ಷ ಮತ್ತು ಕಿರುಕುಳದಿಂದ ತಪ್ಪಿಸಿಕೊಳ್ಳಲು 1970 ರ ದಶಕದ ಉತ್ತರಾರ್ಧದಿಂದ ಪಾಕಿಸ್ತಾನಕ್ಕೆ ವಲಸೆ ಬಂದಿರುವವರನ್ನು ನೋಂದಾಯಿತ ನಿರಾಶ್ರಿತರ ಪಟ್ಟಿಗೆ ಸೇರಿಸಲಾಗಿದೆ. ಇವರ ಪಿಒಆರ್ ಕಾರ್ಡ್ಗಳನ್ನು ಪ್ರತಿ ಆರು ತಿಂಗಳಿಗೊಮ್ಮೆ ನವೀಕರಿಸಲಾಗುತ್ತದೆ. ಆದಾಗ್ಯೂ, ಶುಕ್ರವಾರದ ಹೇಳಿಕೆಯ ಪ್ರಕಾರ ಜೂನ್ 30 ರಂದು ಈ ಕಾರ್ಡ್ಗಳ ಅವಧಿ ಮುಗಿದಾಗ ಯಾಕೆ ನವೀಕರಣ ಮಾಡಲಾಗಿಲ್ಲ ಎಂಬ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಿಲ್ಲ.
ಅಕ್ಟೋಬರ್ ಆರಂಭದಲ್ಲಿ, ಇಸ್ಲಾಮಾಬಾದ್ ಕಾನೂನುಬದ್ಧ ದಾಖಲೆಗಳಿಲ್ಲದ ಎಲ್ಲಾ ವಿದೇಶಿಯರು ನವೆಂಬರ್ 1 ರೊಳಗೆ ಸ್ವಯಂಪ್ರೇರಿತವಾಗಿ ತಮ್ಮ ದೇಶಗಳಿಗೆ ಮರಳಲು ಒಂದು ತಿಂಗಳ ಗಡುವು ವಿಧಿಸಿತ್ತು. ಹಾಗೆ ಮಾಡದವರನ್ನು ಬಂಧಿಸುವ ಮತ್ತು ಗಡೀಪಾರು ಮಾಡುವ ಎಚ್ಚರಿಕೆ ನೀಡಿತ್ತು. ಸರಿಯಾದ ದಾಖಲೆಗಳಿಲ್ಲದ ವಲಸಿಗರನ್ನು ತೆಗೆದುಹಾಕುವ ಯೋಜನೆಯ ಭಾಗವಾಗಿ 2,50,000 ಕ್ಕೂ ಹೆಚ್ಚು ಅಫ್ಘಾನ್ ವ್ಯಕ್ತಿಗಳು ಈ ಘೋಷಣೆಯ ನಂತರ ಸ್ವಯಂಪ್ರೇರಿತವಾಗಿ ತವರು ದೇಶಕ್ಕೆ ಮರಳಿದ್ದಾರೆ ಎಂದು ಉಸ್ತುವಾರಿ ಪ್ರಧಾನಿ ಅನ್ವರ್-ಉಲ್-ಹಕ್ ಕಾಕರ್ ಬುಧವಾರ ಹೇಳಿದ್ದಾರೆ.
ಪಾಕಿಸ್ತಾನ ಸರ್ಕಾರದ ನಿರ್ಧಾರಕ್ಕೆ ತಾಲಿಬಾನ್ ವಿರೋಧ: ಏತನ್ಮಧ್ಯೆ ತನ್ನ ನಾಗರಿಕರನ್ನು ಗಡೀಪಾರು ಮಾಡುವ ಪಾಕಿಸ್ತಾನ ಸರ್ಕಾರದ ನಿರ್ಧಾರಕ್ಕೆ ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿದೆ. ಇಸ್ಲಾಮಾಬಾದ್ ತನ್ನ ನಿರ್ಧಾರವನ್ನು ಮರುಪರಿಶೀಲಿಸುವಂತೆ ಅದು ಆಗ್ರಹಿಸಿದೆ. ಎರಡು ವರ್ಷಗಳ ಹಿಂದೆ ಕಾಬೂಲ್ನಲ್ಲಿ ತಾಲಿಬಾನ್ ಅಧಿಪತ್ಯ ಸ್ಥಾಪಿಸಿದ ನಂತರ ಪಲಾಯನ ಮಾಡಿ ಬಂದವರು ಸೂಕ್ತ ದಾಖಲೆಗಳಿಲ್ಲದೆ ಅಥವಾ ವೀಸಾ ಅವಧಿ ಮುಗಿದಿದ್ದರಿಂದ ಪ್ರಮುಖವಾಗಿ ಗಡೀಪಾರಿನ ಆತಂಕದಲ್ಲಿದ್ದಾರೆ.
ಇದನ್ನೂ ಓದಿ : ಅಲ್-ಶಿಫಾ ಆಸ್ಪತ್ರೆಯಲ್ಲಿನ ಶಿಶುಗಳ ರಕ್ಷಣೆಗೆ ಸಹಾಯ ಮಾಡಲಿದೆ ಇಸ್ರೇಲ್