ಬೀಜಿಂಗ್: ಜಗತ್ತನ್ನೇ ತಲ್ಲಣಗೊಳಿಸಿದ ಕೋವಿಡ್-19 ಸಾಂಕ್ರಾಮಿಕದ ಮೂಲ ಯಾವುದು ಎಂಬುದು ಸಂಶೋಧಕರನ್ನು ಗೊಂದಲಕ್ಕೀಡು ಮಾಡಿದೆ. ಈಗ ಚೀನಾದ ವುಹಾನ್‌ನಲ್ಲಿರುವ ಸಮುದ್ರ ಖಾದ್ಯ ಮಾರುಕಟ್ಟೆಯಲ್ಲಿ ಅಕ್ರಮವಾಗಿ ಮಾರಾಟವಾಗುತ್ತಿರುವ ಸೋಂಕಿತ ರಕೂನ್ ನಾಯಿಗಳಿಂದ ವೈರಸ್ ಹರಡಿರಬಹುದು ಎಂದು ಅಂತಾರಾಷ್ಟ್ರೀಯ ವೈರಸ್ ತಜ್ಞರ ತಂಡವೊಂದು ತಿಳಿಸಿದೆ.
"ಸಾಂಕ್ರಾಮಿಕ ರೋಗ ಹೇಗೆ ಪ್ರಾರಂಭವಾಯಿತು ಎಂಬುದಕ್ಕೆ ಈ ಡೇಟಾ ನಿರ್ಣಾಯಕ ಉತ್ತರ ನೀಡುವುದಿಲ್ಲ. ಆದರೆ, ಆ ಉತ್ತರಕ್ಕೆ ಹತ್ತಿರವಾಗಲು ಪ್ರತಿಯೊಂದು ಡೇಟಾವು ಮುಖ್ಯವಾಗಿದೆ" ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೊಸ್ ಅಧಾನಮ್ ಘೆಬ್ರೆಯೆಸಸ್ ಶುಕ್ರವಾರ ಹೇಳಿದ್ದಾರೆ.
ಅಂತಾರಾಷ್ಟ್ರೀಯ ವೈರಸ್ ತಜ್ಞರ ತಂಡದ ಪ್ರಕಾರ "ಮಾರಣಾಂತಿಕ ಕೋವಿಡ್ ಸಾಂಕ್ರಾಮಿಕ ಚೀನಾದ ವುಹಾನ್ ಮಾರುಕಟ್ಟೆಯಲ್ಲಿ ರಕೂನ್ ನಾಯಿಗಳಿಂದ ಹರಡಿರುವ ಸಾಧ್ಯತೆಯಿದೆ. ಸಾಂಕ್ರಾಮಿಕ ರೋಗದ ಸುಮಾರು 3 ವರ್ಷಗಳ ನಂತರವೂ ಕೋವಿಡ್ನ ಮೂಲ ಸ್ಪಷ್ಟವಾಗಿಲ್ಲ. ವೈರಸ್ ಬಾವಲಿಗಳಿಂದ ಅಥವಾ ಪ್ರಯೋಗಾಲಯದಿಂದ ಸೋರಿಕೆಯಾಗಿದೆ" ಎಂದು ಜಾಗತಿಕವಾಗಿ ವಿಜ್ಞಾನಿಗಳು ಮತ್ತು ರಾಜಕಾರಣಿಗಳೊಂದಿಗೆ ರಾಜಕೀಯ ಮತ್ತು ವೈಜ್ಞಾನಿಕವಾಗಿ ಚರ್ಚೆ ನಡೆದಿತ್ತು, ಅದು ಈಗಲೂ ಮುಂದುವರೆದಿದೆ.
ಈ ಮಧ್ಯೆ ಬಂದ ಈ ಹೊಸ ಅಧ್ಯಯನ ಇನ್ನೂ ಪ್ರಕಟವಾಗಬೇಕಿದೆ. ಇದು ಅರಿಝೋನಾ, ಉತಾಹ್ ಮತ್ತು ಸಿಡ್ನಿ ವಿಶ್ವವಿದ್ಯಾನಿಲಯಗಳು ಮತ್ತು ಸ್ಕ್ರಿಪ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್ ಸೇರಿದಂತೆ ತಜ್ಞರ ನೇತೃತ್ವದ ತಂಡ 2020ರ ಜನವರಿಯಲ್ಲಿ ಹುವಾನಾನ್ ಸಮುದ್ರ ಖಾದ್ಯ ಸಗಟು ಮಾರುಕಟ್ಟೆಯಿಂದ ಮತ್ತು ಅದರ ಸುತ್ತಮುತ್ತಲಿನ ಸ್ವ್ಯಾಬ್‌ಗಳಿಂದ ಪಡೆದ ಆನುವಂಶಿಕ ಡೇಟಾವನ್ನು ಆಧರಿಸಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
2020ರಲ್ಲಿ ವುಹಾನ್ನ ಹುವಾನನ್ ಸಮುದ್ರ ಖಾದ್ಯ ಮಾರುಕಟ್ಟೆ ಮತ್ತು ಸುತ್ತಲಿನ ಪ್ರದೇಶಗಳಿಂದ ತೆಗೆದ ಸ್ರಾವ(ಗಂಟಲು ದ್ರವ ಇತ್ಯಾದಿ)ದ ಅನುವಂಶಿಕ ಡೇಟಾವನ್ನು ಅಧ್ಯಯನ ತಂಡ ಸಂಗ್ರಹಿಸಿದೆ. ಮಾರುಕಟ್ಟೆಗೆ ಪ್ರಾಣಿಗಳನ್ನು ಸಾಗಿಸಲು ಬಳಸಲಾದ ಬೋನುಗಳು, ಗೂಡುಗಳು ಹಾಗೂ ಮಾರುಕಟ್ಟೆಯ ಗೋಡೆ, ನೆಲದಿಂದ ಈ ಸ್ರಾವಗಳನ್ನು ಸಂಶೋಧಕರು ಸಂಗ್ರಹಿಸಿದ್ದರು.
ಪ್ರಾಣಿಗಳಿಂದ ಸೋಂಕು ಹರಡಿರುವ ಸಾಧ್ಯತೆ: ಸೋಂಕು ಉಲ್ಬಣಗೊಂಡಾಗ ಈ ಮಾರುಕಟ್ಟೆಯನ್ನು ಮುಚ್ಚಲಾಗಿತ್ತು. ಹೀಗೆ ಸಂಗ್ರಹಿಸಲಾದ ಒಂದು ಸ್ಯಾಂಪಲ್ ರಕೂನ್ ನಾಯಿಗಳದ್ದಾಗಿದ್ದು, ಇದರಲ್ಲಿ ಸೋಂಕಿತ ವೈರಸ್ ಕಂಡು ಬಂದಿದೆ. ಹೆಚ್ಚಿನ ಪ್ರಮಾಣದ ಅನುವಂಶಿಕ ವಸ್ತುಗಳು ರಕೂನ್ ನಾಯಿಗೆ ಹೊಂದಿಕೆಯಾಗುತ್ತವೆ. ಈ ಸಂಶೋಧನೆಯು, ಕೋವಿಡ್ ಸೋಂಕು ಕಾಡು ಪ್ರಾಣಿಗಳಿಂದ ಮನುಷ್ಯನಿಗೆ ಹರಡಿರುವ ಸಾಧ್ಯತೆಗೆ ಮತ್ತಷ್ಟು ಪುಷ್ಟಿ ನೀಡಿದೆ. ಮಾರುಕಟ್ಟೆಯಲ್ಲಿನ ಪ್ರಾಣಿಗಳು ಸೋಂಕು ಪೀಡಿತವಾಗಿರುವುದನ್ನು ಇದು ಬಲವಾಗಿ ಸೂಚಿಸಿದೆ ಎಂದು ಸಂಶೋಧಕರ ತಂಡದಲ್ಲಿದ್ದ ವಿಜ್ಞಾನಿ ಏಂಜೆಲಾ ರಸ್ಮುಸೆನ್ ಹೇಳಿದ್ದಾರೆ.
ಚೀನಾದ ಸಂಶೋಧಕರು ಜಿಐಎಸ್‌ಎಐಡಿ(ಗ್ಲೋಬಲ್ ಇನೀಷಿಯೇಟಿವ್ ಆನ್ ಶೇರಿಂಗ್ ಆವಿಯನ್ ಇನ್ಫ್ಲುಯೆಂಝಾ ಡೇಟಾ)ದಲ್ಲಿ ಅಪ್ಲೋಡ್ ಮಾಡಿರುವ ಅನುವಂಶಿಕ ಡೇಟಾವನ್ನು ಉತ್ತರ ಅಮೆರಿಕ, ಆಸ್ಟ್ರೇಲಿಯಾ ಮತ್ತು ಯುರೋಪ್ನ ವಿಜ್ಞಾನಿಗಳು ಡೌನ್ಲೋಡ್ ಮಾಡಿಕೊಂಡು ಅಧ್ಯಯನ ನಡೆಸಿದ ವರದಿ ಇದಾಗಿದೆ. ವುಹಾನ್ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಪ್ರಾಣಿಗಳನ್ನು ತಂದ ವ್ಯಕ್ತಿಯು ಕೋವಿಡ್ ಸೋಂಕಿತನಾಗಿರುವ ಸಾಧ್ಯತೆಯಿದೆ ಎಂದು ಚೀನಾದ ಸಂಶೋಧಕರು ಅಭಿಪ್ರಾಯಪಟ್ಟಿದ್ದರು.
ರಕೂನ್ ನಾಯಿಗಳು ನರಿಗಳ ಜೊತೆ ಅನುವಂಶಿಕ ಸಂಬಂಧ ಹೊಂದಿವೆ ಮತ್ತು ಕೊರೊನಾ ವೈರಸ್ ಹರಡಲು ಸಮರ್ಥವಾಗಿವೆ ಎಂದು ತಿಳಿದು ಬಂದಿದೆ. ಈ ಮಾದರಿಗಳಲ್ಲಿ ಕನಿಷ್ಠ ಒಂದರಲ್ಲಿ ವೈರಸ್ ನ್ಯೂಕ್ಲಿಯಿಕ್ ಆಮ್ಲವಿದೆ. ಸಾಕಷ್ಟು ರಕೂನ್ ನಾಯಿಗಳಲ್ಲಿಯೂ ಅದೇ ತರಹದ ನ್ಯೂಕ್ಲಿಯಿಕ್ ಆಮ್ಲವಿದೆ ಎಂದು ನಾವು ತುಲನಾತ್ಮಕವಾಗಿ ಕಂಡು ಹಿಡಿಯಲು ಸಾಧ್ಯವಾಯಿತು ಎಂದು ಉತಾಹ್ ವಿಶ್ವವಿದ್ಯಾನಿಲಯದ ವೈರಾಲಜಿಸ್ಟ್ ಸ್ಟೀಫನ್ ಗೋಲ್ಡ್‌ಸ್ಟೈನ್ ವಿಶ್ಲೇಷಣೆ ಮಾಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಖಚಿತವಾಗಿ ಸಾಬೀತುಪಡಿಸಲು ಸಾಧ್ಯವಿಲ್ಲ: ಆದಾಗ್ಯೂ, ತಂಡ ವೈರಸ್ ಮತ್ತು ಪ್ರಾಣಿಯ ಆನುವಂಶಿಕ ವಸ್ತುಗಳು ತುಲನಾತ್ಮಕವಾಗಿ ಒಂದೇ ಎಂಬುದು ಕಂಡು ಬಂದರೂ ರಕೂನ್ ನಾಯಿ ಸ್ವತಃ ಸೋಂಕಿಗೆ ಒಳಗಾಗಿದೆ ಎಂಬುದನ್ನು ಅದು ಸಾಬೀತು ಪಡಿಸುವುದಿಲ್ಲ. ರಕೂನ್ ನಾಯಿ ಸೋಂಕಿಗೆ ಒಳಗಾಗಿದ್ದರೂ ನಾಯಿಯಿಂದಲೇ ಜನರಿಗೆ ವೈರಸ್ ಹರಡಿದೆ ಎಂಬುದು ಸ್ಪಷ್ಟವಾಗಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ. ಮತ್ತೊಂದು ಪ್ರಾಣಿಯು ಜನರಿಗೆ ವೈರಸ್ ಅನ್ನು ರವಾನಿಸಿರಬಹುದು ಅಥವಾ ವೈರಸ್ ಸೋಂಕಿತ ಯಾರಾದರೂ ರಕೂನ್ ನಾಯಿಗೆ ವೈರಸ್ ಅನ್ನು ಹರಡಿರಲೂಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.
ನಮ್ಮಲ್ಲಿ ಸೋಂಕಿತ ಪ್ರಾಣಿ ಇಲ್ಲ ಮತ್ತು ಆ ಮಾರುಕಟ್ಟೆಯಲ್ಲಿ ಸೋಂಕಿತ ಪ್ರಾಣಿ ಇತ್ತು ಎಂದು ನಾವು ಖಚಿತವಾಗಿ ಸಾಬೀತುಪಡಿಸಲು ಸಾಧ್ಯವಿಲ್ಲ ಎಂದು ಗೋಲ್ಡ್‌ಸ್ಟೈನ್ ಹೇಳಿದ್ದಾರೆ. ಆದರೆ, ವೈರಸ್‌ನಿಂದ ಆನುವಂಶಿಕ ವಸ್ತುವು ಸಾಕಷ್ಟು ಸ್ಥಿರವಾಗಿದೆ. ಅದು ನಿಖರವಾಗಿ ಯಾವಾಗ ಮಾರುಕಟ್ಟೆಗೆ ಬಂದಿತು ಎಂಬುದು ಸ್ಪಷ್ಟವಾಗಿಲ್ಲ ಎಂದು ಅವರು ಹೇಳಿದ್ದಾರೆ.
ಆನುವಂಶಿಕ ಡೇಟಾವನ್ನು ಚೀನೀ ಸಂಶೋಧಕರು ಜಿಐಎಸ್‌ಎಐಡಿನಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಮುಕ್ತ ಪ್ರವೇಶ ಜೀನೋಮಿಕ್ ಡೇಟಾ ಬೇಸ್ ಆಗಿದೆ. ನಂತರ ಅದನ್ನು ಉತ್ತರ ಅಮೆರಿಕ, ಆಸ್ಟ್ರೇಲಿಯಾ ಮತ್ತು ಯುರೋಪಿನ ವಿಜ್ಞಾನಿಗಳು ಡೌನ್‌ಲೋಡ್ ಮಾಡಿ ವಿಶ್ಲೇಷಿಸಿದ್ದಾರೆ. ಡೇಟಾವನ್ನು ಅಪ್ಲೋಡ್ ಮಾಡಿದ ಚೀನಾದ ಸಂಶೋಧಕರು ಈಗಾಗಲೇ ಮಾದರಿಗಳನ್ನು ಪರಿಶೀಲಿಸಿದ್ದಾರೆ. ಆದರೆ, ಅವರ ಅಧ್ಯಯನವು “SARS-CoV-2 ನ ಯಾವುದೇ ಪ್ರಾಣಿ ಸಂಕುಲದಿಂದ ಬಂದಿದ್ದರ ಬಗ್ಗೆ ನಿರ್ಣಯಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
ಮಾರುಕಟ್ಟೆಯಲ್ಲಿ ಕಂಡುಬರುವ ವೈರಸ್ ಸೋಂಕಿತ ವ್ಯಕ್ತಿಯಿಂದ ಬಂದಿರಬಹುದು. ಮತ್ತು ಅದು ಅಲ್ಲಿ ಮಾರಾಟವಾಗುತ್ತಿರುವ ಕಾಡು ಪ್ರಾಣಿಯಿಂದಲ್ಲ ಎಂದು ವಿಶ್ಲೇಷಣೆ ಸೂಚಿಸಿದೆ ಎಂದು ವರದಿ ತಿಳಿಸಿದೆ. ಫೆಬ್ರವರಿಯಲ್ಲಿ, ವಾಲ್ ಸ್ಟ್ರೀಟ್ ಜರ್ನಲ್ ಯುಎಸ್ ಇಂಧನ ಇಲಾಖೆಯು ಕೋವಿಡ್ ವೈರಸ್ ಪ್ರಯೋಗಾಲಯದಿಂದ ಸೋರಿಕೆಯಾಗಿದೆ ಎಂದು ವರದಿ ಮಾಡಿತ್ತು. ಆದರೆ ಯುಎಸ್ ಗುಪ್ತಚರ ಸಮುದಾಯದ ಇತರರು ಇದು ಮೊದಲು ಪ್ರಾಣಿಗಳಿಂದ ಬಂದಿರಬಹುದು ಎಂದು ಊಹಿಸಿದ್ದರು. ಆದರೆ, ಸಾಂಕ್ರಾಮಿಕ ರೋಗದ ನಿಜವಾದ ಮೂಲ ಯಾವುದು ಎಂಬುವುದು ಈವರೆಗೆ ತಿಳಿದಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಚೀನಾದ ಪ್ರಯೋಗಾಲಯದಿಂದ ಕೋವಿಡ್ ಸೋಂಕು ಸೋರಿಕೆ; ಅಮೆರಿಕ ಏಜೆನ್ಸಿ