ಇಸ್ಲಾಮಾಬಾದ್: ಇಸ್ಲಾಮಾಬಾದ್‌ನಲ್ಲಿ ಬುರ್ಖಾ ಧರಿಸಿದ್ದ ಮಹಿಳೆಗೆ ವ್ಯಕ್ತಿಯೊಬ್ಬ ಲೈಂಗಿಕ ಕಿರುಕುಳ ನೀಡಿ ಪರಾರಿಯಾದ ಘಟನೆ ನಡೆದಿದೆ. ಹಾಡಹಗಲೇ ನಡೆದ ಈ ಅಸಭ್ಯ ವರ್ತನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಾಜಧಾನಿ ಇಸ್ಲಾಮಾಬಾದ್‌ನ ರಸ್ತೆಯಲ್ಲಿ ಮಹಿಳೆ ನಡೆದುಕೊಂಡು ಹೋಗುತ್ತಿರುವಾಗ ಹಿಂದಿನಿಂದ ಬಂದ ಕೀಚಕ ಆಕೆಯನ್ನು ತಬ್ಬಿಕೊಂಡು ಅಸಭ್ಯವಾಗಿ ವರ್ತಿಸಿದ್ದಾನೆ. ಹಠಾತ್ತಾಗಿ ನಡೆದ ಘಟನೆಯಿಂದ ಮಹಿಳೆ ಆತನಿಂದ ಕೊಸರಿಕೊಳ್ಳಲು ಒದ್ದಾಡಿದ್ದಾಳೆ. ಬಳಿಕ ಆ ಬೀದಿ ಕಾಮಣ್ಣ ಮಹಿಳೆಯನ್ನು ಬಿಟ್ಟು ಪರಾರಿಯಾಗಿದ್ದಾನೆ. ಇದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ವಿಡಿಯೋಗೆ ಪ್ರತಿಕ್ರಿಯಿಸಿರುವ ಹಿರಿಯ ಪತ್ರಕರ್ತ ಹಮೀದ್ ಮಿರ್, ಈ ವ್ಯಕ್ತಿಯನ್ನು ಹಿಡಿದು ಶಿಕ್ಷಿಸಬೇಕು. ಮಹಿಳೆಯನ್ನು ಬಹಿರಂಗವಾಗಿ ಈ ರೀತಿ ನಡೆಸಿಕೊಂಡಿದ್ದು ನಾಚಿಕೆಗೇಡಿನ ಸಂಗತಿಯಾಗಿದೆ. ಕಠಿಣ ಶಿಕ್ಷೆ ನೀಡುವ ಮೂಲಕ ಇಂತಹ ಪುರುಷರಿಗೆ ತಕ್ಕ ಪಾಠ ಕಲಿಸಬೇಕಿದೆ ಎಂದು ಒತ್ತಾಯಿಸಿದ್ದಾರೆ.
ಕೆಲ ದಿನಗಳ ಹಿಂದೆಯೂ ಇದೇ ರೀತಿಯ ಘಟನೆ ಪಾಕಿಸ್ತಾನದ ಮೆಟ್ರೋ ನಿಲ್ದಾಣದ ಹೊರಗೆ ನಡೆದಿತ್ತು. ಕೆಲ ವ್ಯಕ್ತಿಗಳು ಮಹಿಳೆಗೆ ಲೈಂಗಿಕ ಕಿರುಕುಳ ನೀಡಿ ಹಲ್ಲೆ ಮಾಡಿದ್ದರು. ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಉಂಟು ಮಾಡಿತ್ತು.
ಪಾಕಿಸ್ತಾನದಲ್ಲಿ ಕೆಲಸದ ಸ್ಥಳದಲ್ಲಿ ಶೇಕಡಾ 70 ರಷ್ಟು ಮಹಿಳೆಯರು ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ. ಇಂತಹ ದುಃಸ್ಥಿತಿಗೆ ಅಂತ್ಯವೇ ಇಲ್ಲದಂತಾಗಿದೆ ಎಂಬ ಕಳವಳಕಾರಿ ಅಂಶವನ್ನು ವರದಿಯೊಂದು ಬಹಿರಂಗಪಡಿಸಿದೆ. ಮಹಿಳೆಯರ ಹಕ್ಕುಗಳ ಪರವಾಗಿರುವ ವೈಟ್ ರಿಬ್ಬನ್ ಪಾಕಿಸ್ತಾನ್ ಎನ್ಜಿಒ ಸಂಗ್ರಹಿಸಿದ ಮಾಹಿತಿಯ ಪ್ರಕಾರ 2004 ರಿಂದ 2016 ರವರೆಗೆ 4,734 ಮಹಿಳೆಯರು ಲೈಂಗಿಕ ದೌರ್ಜನ್ಯವನ್ನು ಎದುರಿಸಿದ್ದಾರೆ ಎಂದು ಹೇಳಿದೆ.
ಇದನ್ನೂ ಓದಿ: ಶ್ರೀಲಂಕಾ ಬಿಕ್ಕಟ್ಟು ಚರ್ಚಿಸಲು ಸರ್ವಪಕ್ಷ ಸಭೆ ಕರೆದ ಕೇಂದ್ರ ಸರ್ಕಾರ