ಟೆಲ್ ಅವೀವ್ : ಹಮಾಸ್ ನ ಭದ್ರಕೋಟೆಗಳಲ್ಲಿ ಒಂದೆಂದು ಪರಿಗಣಿಸಲಾಗಿರುವ ಗಾಜಾ ಪಟ್ಟಿಯ ಜಬಾಲಿಯಾ ಪ್ರದೇಶವನ್ನು ಸುತ್ತುವರೆದಿರುವುದಾಗಿ ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಮಂಗಳವಾರ ತಿಳಿಸಿದೆ. 215 ನೇ ಬ್ರಿಗೇಡ್ನ ಫಿರಂಗಿ ಘಟಕ ಮತ್ತು ಅದರ ವಾಯು ದಾಳಿಗಳು ಈ ಪ್ರದೇಶವನ್ನು ಸುತ್ತುವರಿಯಲು ಸಹಾಯ ಮಾಡಿವೆ ಎಂದು ಐಡಿಎಫ್ ಹೇಳಿಕೆಯಲ್ಲಿ ತಿಳಿಸಿದೆ. ಐಡಿಎಫ್ ನೆಲದಿಂದ ಮತ್ತು ಆಕಾಶದಿಂದ ಸಂಯೋಜಿತ ದಾಳಿಯೊಂದಿಗೆ ಭಯೋತ್ಪಾದಕ ಮೂಲಸೌಕರ್ಯಗಳನ್ನು ನಾಶಪಡಿಸಿದೆ ಎಂದು ಅದು ಹೇಳಿದೆ.
551 ನೇ ವಿಭಾಗದ ಯುದ್ಧ ಪಡೆಗಳು ವಿಶೇಷ ಪಡೆಗಳು ಇತರ ಬೆಟಾಲಿಯನ್ಗಳಿಗೆ ಜಬಾಲಿಯಾದೊಳಗೆ ಪ್ರವೇಶಿಸಲು ಮತ್ತು ಹಮಾಸ್ ಉಗ್ರರ ದಾಳಿಯನ್ನು ತಡೆಯಲು ಮಾರ್ಗವನ್ನು ತೆರೆದಿವೆ. ಹಮಾಸ್ನ ಹಲವಾರು ಸುರಂಗ ಶಾಫ್ಟ್ಗಳನ್ನು ನಾಶಪಡಿಸಿ, ಹಮಾಸ್ ಕಾರ್ಯನಿರ್ವಹಿಸುತ್ತಿದ್ದ ಅನೇಕ ಕಟ್ಟಡಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಐಡಿಎಫ್ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಲೆಬನಾನ್ನ 3 ಹಿಜ್ಬುಲ್ಲಾ ನೆಲೆಗಳ ಮೇಲೆ ಐಡಿಎಫ್ ದಾಳಿ: ಹಿಜ್ಬುಲ್ಲಾಗೆ ಸೇರಿದ ಲೆಬನಾನ್ ಗಡಿಯಲ್ಲಿನ ಮೂರು ವಿರೋಧಿ ನೆಲೆಗಳ ಮೇಲೆ ಇಸ್ರೇಲ್ ಪಡೆಗಳು ದಾಳಿ ನಡೆಸಿವೆ ಎಂದು ಇಸ್ರೇಲ್ ಸೇನೆಯ ವಕ್ತಾರರು ಮಂಗಳವಾರ ತಿಳಿಸಿದ್ದಾರೆ. ಇಸ್ರೇಲ್ ರಕ್ಷಣಾ ಪಡೆಗಳ (ಐಡಿಎಫ್) ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, ಮಿಲಿಟರಿ ವಿಮಾನಗಳು ಭಯೋತ್ಪಾದಕರ ಮಿಲಿಟರಿ ಮೂಲಸೌಕರ್ಯ ಸೇರಿದಂತೆ ಹಿಜ್ಬುಲ್ಲಾ ಭಯೋತ್ಪಾದಕ ಸಂಘಟನೆಯ ಹಲವಾರು ನೆಲೆಗಳ ಮೇಲೆ ದಾಳಿ ನಡೆಸಿದವು ಎಂದು ಬರೆದಿದ್ದಾರೆ.
ಲೆಬನಾನ್ ಗಡಿ ಪ್ರದೇಶದಲ್ಲಿನ ಐಡಿಎಫ್ ನೆಲೆಗಳ ಮೇಲೆ ಭಯೋತ್ಪಾದಕರು ಮೋರ್ಟಾರ್ ಬಾಂಬ್ ದಾಳಿ ಮಾಡಿದ್ದಾರೆ. ಆದರೆ ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ಅವರು ಹೇಳಿದರು.
ಹಿಜ್ಬುಲ್ಲಾ ನೆಲೆಗಳಿಂದ ಕ್ಷಿಪಣಿ ಮತ್ತು ಮೋರ್ಟಾರ್ಗಳಿಂದ ಉತ್ತರ ಇಸ್ರೇಲ್ ಕಡೆಗೆ ಪದೇ ಪದೆ ದಾಳಿ ನಡೆದಿವೆ ಎಂದು ಐಡಿಎಫ್ ಪ್ರತ್ಯೇಕ ಹೇಳಿಕೆಯಲ್ಲಿ ತಿಳಿಸಿದೆ. ತಮ್ಮ ಮೇಲೆ ದಾಳಿ ನಡೆಸಿದರೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಇಸ್ರೇಲ್ ಇರಾನ್ ಮೂಲದ ಉಗ್ರಗಾಮಿ ಗುಂಪು ಹಿಜ್ಬುಲ್ಲಾಗೆ ಎಚ್ಚರಿಕೆ ನೀಡಿದೆ. ಅಕ್ಟೋಬರ್ 7 ರಂದು ಇಸ್ರೇಲ್ ಮೇಲಿನ ಹಮಾಸ್ ದಾಳಿ ಬೆಂಬಲಿಸಿ ಅಕ್ಟೋಬರ್ 8 ರಂದು ಹಿಜ್ಬುಲ್ಲಾ ಶೆಬಾ ಫಾರ್ಮ್ಸ್ ಕಡೆಗೆ ಡಜನ್ಗಟ್ಟಲೇ ರಾಕೆಟ್ಗಳನ್ನು ಹಾರಿಸಿದ ನಂತರ ಲೆಬನಾನ್ - ಇಸ್ರೇಲ್ ಗಡಿಯಲ್ಲಿ ಉದ್ವಿಗ್ನತೆ ನಿರಂತರವಾಗಿ ಮುಂದುವರೆದಿದೆ.
ಇದನ್ನೂ ಓದಿ: ಹೈಪರ್ಸಾನಿಕ್ ಕ್ಷಿಪಣಿ ಫತಾಹ್-2 ಅನಾವರಣಗೊಳಿಸಿದ ಇರಾನ್