ಸ್ಯಾನ್ ಫ್ರಾನ್ಸಿಸ್ಕೋ : ಗೂಗಲ್ ಸಹ ಸಂಸ್ಥಾಪಕ ಸೆರ್ಗೆ ಬ್ರಿನ್ ಸದ್ದಿಲ್ಲದೆ ಪತ್ನಿ ನಿಕೋಲ್ ಶಾನಾಹನ್ರಿಗೆ ವಿಚ್ಛೇದನ ನೀಡಿದ್ದಾರೆ. ಶಾನಾಹನ್ ಸ್ವತಃ ವಕೀಲೆ ಮತ್ತು ಉದ್ಯಮಿಯೂ ಆಗಿದ್ದಾರೆ. ಟೆಸ್ಲಾ ಮತ್ತು ಸ್ಪೇಸ್ ಎಕ್ಸ್ ಸಿಇಒ ಎಲೋನ್ ಮಸ್ಕ್ ಅವರೊಂದಿಗೆ ಶಾನಾಹನ್ ಪ್ರಣಯ ಸಂಬಂಧ ಹೊಂದಿದ್ದಾರೆ ಎಂಬ ವದಂತಿಗಳ ಹಿನ್ನೆಲೆಯಲ್ಲಿ ಬ್ರಿನ್ ಪತ್ನಿಗೆ ವಿಚ್ಛೇದನ ನೀಡಿದ್ದಾರೆ ಎಂದು ವರದಿಗಳು ಹೇಳಿವೆ. ಮಸ್ಕ್ ಅವರೊಂದಿಗೆ ಸಂಬಂಧ ಹೊಂದಿದ ಕಾರಣಕ್ಕೇ ವಿಚ್ಛೇದನ ನಡೆದಿದೆ ಎಂದು ನ್ಯಾಯಾಲಯದ ದಾಖಲೆಗಳು ಬಹಿರಂಗಪಡಿಸಿವೆ.
ದಂಪತಿಗಳ ವಿಚ್ಛೇದನವು ಮೇ 26 ರಂದು ಅಧಿಕೃತವಾಗಿ ಜಾರಿಗೆ ಬಂದಿದೆ ಎಂದು ನ್ಯಾಯಾಲಯದ ದಾಖಲೆಗಳು ದೃಢಪಡಿಸಿವೆ. ಸದ್ಯ ಇಬ್ಬರೂ ತಮ್ಮ ನಾಲ್ಕು ವರ್ಷದ ಮಗಳನ್ನು ಜಂಟಿಯಾಗಿ ಪಾಲನೆ ಮಾಡಲಿದ್ದಾರೆ. ತಮ್ಮ ದಾಂಪತ್ಯದಲ್ಲಿ ಯಾವುದೇ ಸಮಸ್ಯೆ ಇತ್ತು ಎಂಬುದನ್ನು ಸೆರ್ಗೆ ಬ್ರಿನ್ ಮತ್ತು ಶಾನಾಹನ್ ಇಬ್ಬರೂ ನಿರಾಕರಿಸಿದ್ದಾರೆ. ಈ ಬಗ್ಗೆ ಎಲೋನ್ ಮಸ್ಕ್ ಕೂಡ ಪ್ರತಿಕ್ರಿಯೆ ನೀಡಿದ್ದು, "ಇದನ್ನು ನನಗೆ ನಂಬಲಾಗುತ್ತಿಲ್ಲ, ಶಾನಾಹನ್ ಮತ್ತು ನಾನು ಒಳ್ಳೆಯ ಫ್ರೆಂಡ್ಸ್ ಮಾತ್ರ. ಕಳೆದ ರಾತ್ರಿ ನಾವಿಬ್ಬರೂ ಪಾರ್ಟಿಯೊಂದರಲ್ಲಿ ಜೊತೆಗಿದ್ದೆವು." ಎಂದು ಎಕ್ಸ್ನಲ್ಲಿ ಬರೆದಿದ್ದಾರೆ.
ಮಸ್ಕ್ ಅವರೊಂದಿಗೆ ಯಾವುದೇ ಪ್ರಣಯ ಸಂಬಂಧ ಹೊಂದಿಲ್ಲ ಎಂದು ಶಾನಾಹನ್ ಕೂಡ ಸಮರ್ಥಿಸಿಕೊಂಡಿದ್ದಾರೆ. 50 ವರ್ಷದ ಬ್ರಿನ್, ಮೂರು ವರ್ಷಗಳ ದಾಂಪತ್ಯದ ನಂತರ ಜನವರಿ 6, 2022 ರಂದು 34 ವರ್ಷದ ಶಾನಾಹನ್ ಅವರಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಸೆರ್ಗೆ ಬ್ರಿನ್ ಅವರೊಂದಿಗಿನ ಮದುವೆಗೆ ಮೊದಲು, ನಿಕೋಲ್ ಈ ಹಿಂದೆ ಜೆರೆಮಿ ಕ್ರಾಂಜ್ ಅವರನ್ನು ವಿವಾಹವಾಗಿದ್ದರು.
2014 ರಲ್ಲಿ, ಕ್ರಾಂಜ್ ಶಾನಾಹನ್ ಅವರಿಂದ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು. 2015ರಲ್ಲಿ ಇಬ್ಬರ ಮಧ್ಯೆ ವಿಚ್ಛೇದನ ಆಗಿತ್ತು. ಸೆರ್ಗೆ ಬ್ರಿನ್ ಈ ಹಿಂದೆ 23andMe ಕಂಪನಿಯ ಸಹ ಸಂಸ್ಥಾಪಕಿ ಅನ್ನೆ ವೊಜ್ಕಿಕಿ ಅವರನ್ನು ವಿವಾಹವಾಗಿ, ಎಂಟು ವರ್ಷಗಳ ಕಾಲ ದಾಂಪತ್ಯ ನಡೆಸಿದ್ದರು.
ಸೆರ್ಗೆ ಬ್ರಿನ್ 2019 ರ ಡಿಸೆಂಬರ್ನಲ್ಲಿ ಗೂಗಲ್ನ ಮಾತೃ ಕಂಪನಿ ಆಲ್ಫಾಬೆಟ್ನ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದರು, ಆದರೆ ಮಂಡಳಿಯ ಸದಸ್ಯ ಮತ್ತು ನಿಯಂತ್ರಣ ಷೇರುದಾರರಾಗಿ ಉಳಿದಿದ್ದಾರೆ. ಬ್ರಿನ್ ತನ್ನ ಕುಟುಂಬದೊಂದಿಗೆ 6 ವರ್ಷದವನಿದ್ದಾಗ ರಷ್ಯಾದಿಂದ ಅಮೆರಿಕಕ್ಕೆ ವಲಸೆ ಬಂದಿದ್ದರು. ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದಲ್ಲಿ 1988ರಲ್ಲಿ ಕಂಪ್ಯೂಟರ್ ಸೈನ್ಸ್ ಪದವಿ ಅಧ್ಯಯನದ ಸಮಯದಲ್ಲಿ ಲ್ಯಾರಿ ಪೇಜ್ ಅವರೊಂದಿಗೆ ಸೇರಿ ಗೂಗಲ್ ಅನ್ನು ಸಹಸಂಸ್ಥಾಪಿಸಿದರು.
ಇದನ್ನೂ ಓದಿ : ಸ್ಪೆಕ್ಟ್ರಮ್ ಖರೀದಿಯ 1701 ಕೋಟಿ ರೂ. ಕಂತು ಪಾವತಿಸಿದ ವೊಡಾಫೋನ್ ಐಡಿಯಾ