ಇಸ್ಲಾಮಾಬಾದ್: ಪಾಕಿಸ್ತಾನದ ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ನ್ಯಾಯಾಂಗ ಬಂಧನವನ್ನು ಪಾಕಿಸ್ತಾನದ ವಿಶೇಷ ನ್ಯಾಯಾಲಯ ಸೆಪ್ಟೆಂಬರ್ 26 ರವರೆಗೆ ವಿಸ್ತರಿಸಿದೆ. ಅಧಿಕೃತ ರಹಸ್ಯಗಳ ಕಾಯ್ದೆ, 1923 ಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಗಾಗಿ ಹೊಸದಾಗಿ ರಚಿಸಲಾದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಅಬುಲ್ ಹಸ್ನತ್ ಜುಲ್ಕರ್ನೈನ್ ಅವರು ಮಾಜಿ ಪ್ರಧಾನಿಯನ್ನು ಪ್ರಸ್ತುತ ಇರಿಸಲಾಗಿರುವ ಅಟೋಕ್ ಜೈಲಿನೊಳಗಡೆಯೇ ಸೈಫರ್ ಪ್ರಕರಣದ ವಿಚಾರಣೆಯನ್ನು ನಡೆಸಿದರು.
ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ಅಧ್ಯಕ್ಷರಾಗಿರುವ 70 ವರ್ಷದ ಇಮ್ರಾನ್ ಖಾನ್ ಅವರು ತೋಶಖಾನಾ ಭ್ರಷ್ಟಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾದ ನಂತರ ಆಗಸ್ಟ್ 5 ರಿಂದ ಜೈಲಿನಲ್ಲಿರಿಸಲಾಗಿದೆ. ಆಗಸ್ಟ್ 29 ರಂದು ಇಸ್ಲಾಮಾಬಾದ್ ಹೈಕೋರ್ಟ್ (ಐಎಚ್ಸಿ) ಅವರ ಶಿಕ್ಷೆಯನ್ನು ಅಮಾನತುಗೊಳಿಸಿತ್ತು. ಆದರೆ, ಸೈಫರ್ ಪ್ರಕರಣದಲ್ಲಿ ಸದ್ಯ ಅವರು ಅಟೋಕ್ ಜೈಲಿನಲ್ಲಿದ್ದಾರೆ. ಈ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯವು ಅವರ ರಿಮಾಂಡ್ ಅನ್ನು ಸೆಪ್ಟೆಂಬರ್ 13 ರವರೆಗೆ ವಿಸ್ತರಿಸಿದೆ.
ವಾಷಿಂಗ್ಟನ್ನಲ್ಲಿರುವ ಪಾಕಿಸ್ತಾನದ ರಾಯಭಾರ ಕಚೇರಿಯಿಂದ ಗೌಪ್ಯ ರಾಜತಾಂತ್ರಿಕ ಮಾಹಿತಿ ಸೋರಿಕೆಗೆ ಸಂಬಂಧಿಸಿದಂತೆ ಕ್ರಿಕೆಟಿಗ ಮತ್ತು ರಾಜಕಾರಣಿ ಇಮ್ರಾನ್ ಖಾನ್ ವಿರುದ್ಧ ಅಧಿಕೃತ ರಹಸ್ಯ ಕಾಯ್ದೆಯ ಉಲ್ಲಂಘನೆಯ ಆರೋಪ ಹೊರಿಸಲಾಗಿದೆ. ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಾಲಯವು ಖಾನ್ ಅವರ ರಿಮಾಂಡ್ ಅನ್ನು ಸೆಪ್ಟೆಂಬರ್ ೨೬ ರವರೆಗೆ ವಿಸ್ತರಿಸಿದೆ.
ಏತನ್ಮಧ್ಯೆ ಮಾಜಿ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಅವರ 14 ದಿನಗಳ ನ್ಯಾಯಾಂಗ ಬಂಧನ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅವರನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಖುರೇಷಿ ಅವರ ನ್ಯಾಯಾಂಗ ಬಂಧನವನ್ನು ಸೆಪ್ಟೆಂಬರ್ ೨೬ ರವರೆಗೆ ವಿಸ್ತರಿಸಿದೆ. ಇದಕ್ಕೂ ಮುನ್ನ ಕಾನೂನು ಸಚಿವಾಲಯವು ಮಂಗಳವಾರ ಅಧಿಸೂಚನೆ ಹೊರಡಿಸಿದ್ದು, ಜೈಲಿನಲ್ಲಿ ವಿಚಾರಣೆ ನಡೆಸಲು ಯಾವುದೇ ಆಕ್ಷೇಪಣೆಗಳನ್ನು ವ್ಯಕ್ತಪಡಿಸಿಲ್ಲ.
ಅಟೋಕ್ ಜೈಲು ಅಧೀಕ್ಷಕರ ವಿರುದ್ಧ ಮೊಕದ್ದಮೆ: ಪಾಕಿಸ್ತಾನದ ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸೋಮವಾರ ವಿಶೇಷ ನ್ಯಾಯಾಲಯದಲ್ಲಿ ಅಟೋಕ್ ಜೈಲು ಅಧೀಕ್ಷಕರ ವಿರುದ್ಧ ನ್ಯಾಯಾಂಗ ನಿಂದನೆ ವಿಚಾರಣೆ ನಡೆಸಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂದು ಮಾಧ್ಯಮ ವರದಿ ತಿಳಿಸಿದೆ. ಜೈಲು ಅಧೀಕ್ಷಕರು ತಮ್ಮ ಮಕ್ಕಳೊಂದಿಗೆ ದೂರವಾಣಿಯಲ್ಲಿ ಮಾತನಾಡಲು ಅನುಮತಿ ನಿರಾಕರಿಸಿದ್ದಾರೆ ಎಂದು ಇಮ್ರಾನ್ ಆರೋಪಿಸಿದ್ದಾರೆ. ಲಂಡನ್ನಲ್ಲಿ ತಾಯಿಯೊಂದಿಗೆ ವಾಸಿಸುತ್ತಿರುವ ತನ್ನ ಮಕ್ಕಳಾದ ಖಾಸಿಮ್ ಮತ್ತು ಸುಲೈಮಾನ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಲು ಅನುಮತಿ ಕೋರಿ ಖಾನ್ ತಮ್ಮ ವಕೀಲರ ಮೂಲಕ ನ್ಯಾಯಾಧೀಶ ಜುಲ್ಕರ್ನೈನ್ ಅವರಿಗೆ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ : ಪ್ರೀಮಿಯಂ ಸೇವೆ ವಿಭಾಗದ ಹೆಸರನ್ನು 'ಭಾರತ್ ಪ್ಲಸ್' ಎಂದು ಬದಲಾಯಿಸಿದ ಬ್ಲೂಡಾರ್ಟ್