ಮೆಕ್ಸಿಕೊ ಸಿಟಿ : ಟೆಕ್ಸಾಸ್‌ನ ಎಲ್ ಪಾಸೊದಿಂದ ಗಡಿಯಾಚೆಗಿನ ಸಿಯುಡಾಡ್ ಜುವಾರೆಜ್‌ನಲ್ಲಿರುವ ರಾಜ್ಯ ಕಾರಾಗೃಹದ ಮೇಲೆ ಶಸ್ತ್ರಸಜ್ಜಿತ ವಾಹನಗಳಲ್ಲಿ ಆಗಮಿಸಿದ ಬಂದೂಕುಧಾರಿಗಳು ಭಾನುವಾರ ಮುಂಜಾನೆ ಭೀಕರ ದಾಳಿ ನಡೆಸಿದ್ದಾರೆ. ಪರಿಣಾಮ, ಹತ್ತು ಮಂದಿ ಗಾರ್ಡ್‌ಗಳು ಮತ್ತು ನಾಲ್ವರು ಕೈದಿಗಳು ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಗ್ಗೆ 7 ಗಂಟೆಯ ಸುಮಾರಿಗೆ ವಿವಿಧ ಶಸ್ತ್ರಸಜ್ಜಿತ ವಾಹನಗಳು ಕಾರಾಗೃಹಕ್ಕೆ ಬಂದಿವೆ. ವಾಹನಗಳಲ್ಲಿದ್ದ ಬಂದೂಕುಧಾರಿಗಳು ಕಾವಲುಗಾರರ ಮೇಲೆ ಮೊದಲು ಮನಬಂದಂತೆ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ 14 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 13 ಜನರು ಗಾಯಗೊಂಡಿದ್ದಾರೆ. ಈ ಸಂದರ್ಭದಲ್ಲಿ 24 ಕೈದಿಗಳು ತಪ್ಪಿಸಿಕೊಂಡಿದ್ದಾರೆ.
ಹೊಸ ವರ್ಷದ ಸಲುವಾಗಿ ಕೆಲವು ಕೈದಿಗಳ ಸಂಬಂಧಿಕರು ಭೇಟಿಗೆಂದು ಜೈಲಿಗೆ ಬಂದಿದ್ದರು. ಈ ಸಂದರ್ಭದಲ್ಲಿ ದಾಳಿ ನಡೆದಿದೆ. ಸ್ಥಳದ್ಲಲಿ ಅವ್ಯವಸ್ಥೆ ಉಂಟಾಗಿದ್ದರಿಂದ ಕೆಲವು ಕೈದಿಗಳು ತಪ್ಪಿಸಿಕೊಂಡರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಘಟನೆಯ ನಂತರ ಮೆಕ್ಸಿಕನ್ ಸೈನಿಕರು ಮತ್ತು ರಾಜ್ಯ ಪೊಲೀಸರು ಜೈಲನ್ನು ನಿಯಂತ್ರಣಕ್ಕೆ ತಂದು, ಸಿಬ್ಬಂದಿಯಿಂದ ತನಿಖೆ ನಡೆಸುತ್ತಿದ್ದಾರೆ ಎಂದು ಚಿಹೋವಾ ರಾಜ್ಯ ಪ್ರಾಸಿಕ್ಯೂಟರ್ ಕಚೇರಿ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದೆ.
ಈ ಹಿಂದೆಯೂ ದಾಳಿ ನಡೆದಿತ್ತು: ಇದೇ ರಾಜ್ಯದ ಜೈಲಿನೊಳಗೆ ಕಳೆದ ಆಗಸ್ಟ್‌ನಲ್ಲಿಯೂ ಗಲಭೆ ನಡೆದಿದ್ದು, ಹಿಂಸಾಚಾರದಲ್ಲಿ ಒಟ್ಟು 11 ಜನರು ಅಸುನೀಗಿದ್ದರು. ಇಬ್ಬರು ಕೈದಿಗಳನ್ನು ಹತ್ಯೆ ಮಾಡಲಾಗಿತ್ತು. ಆರೋಪಿಗಳು ಪಟ್ಟಣದಲ್ಲಿ ಗುಂಡಿನ ದಾಳಿ ನಡೆಸಿದ್ದಲ್ಲದೆ, ರೆಸ್ಟೋರೆಂಟ್‌ನಲ್ಲಿ ಪ್ರಚಾರ ಮಾಡುತ್ತಿದ್ದ ರೇಡಿಯೊ ಸ್ಟೇಷನ್‌ನ ನಾಲ್ವರು ಉದ್ಯೋಗಿಗಳನ್ನು ಸಹ ಕೊಂದು ಹಾಕಿದ್ದರು. ಇದಕ್ಕೂ ಮುನ್ನ ಅಂದರೆ 2009ರಲ್ಲಿ ಗಲಭೆ, ಸಂಘರ್ಷಗಳಲ್ಲಿ 20 ಜನರ ಸಾವು ಸಂಭವಿಸಿತ್ತು.
ಮೂಲಗಳು ನೀಡಿದ ಮಾಹಿತಿ ಪ್ರಕಾರ, ಮೆಕ್ಸಿಕನ್ ಜೈಲುಗಳಲ್ಲಿ ಆಗಾಗ್ಗೆ ಹಿಂಸಾಚಾರಗಳು ನಡೆಯುತ್ತಿರುತ್ತವೆ. ಜೈಲಿನಲ್ಲಿರುವ ಕೈದಿಗಳ ನಡುವೆ ಸಂಘರ್ಷಗಳು ಸಾಮಾನ್ಯ. ಇಷ್ಟಾದರೂ ಕೂಡ ಜೈಲಿನಲ್ಲಿ ನಾಮಮಾತ್ರದ ನಿಯಂತ್ರಣವನ್ನು ಕೆಲವು ಅಧಿಕಾರಿಗಳು ಹೊಂದಿದ್ದಾರೆ. ಇದರಿಂದ ಜುವಾರೆಜ್‌ನಂತಹ ಸ್ಥಳಗಳು ಡ್ರಗ್ ಜಾಲಗಳಿಗೆ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ ಎನ್ನಲಾಗಿದೆ.
ಭಾನುವಾರ ನಡೆದ ದಾಳಿಯ ನಂತರ ಬಂದೂಕುದಾರಿಗಳನ್ನು ನೋಡಿರುವ ಮುನ್ಸಿಪಾಲ್ ಪೊಲೀಸರು ಅವರನ್ನು ಹಿಂಬಾಲಿಸಿ ಸೆರೆ ಹಿಡಿದಿದ್ದಾರೆ. ರಾಜ್ಯ ಪ್ರಾಸಿಕ್ಯೂಟರ್ ಕಚೇರಿ ಹೇಳಿಕೆಯಂತೆ, ಎಸ್‌ಯುವಿಯಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಬಂದೂಕುಧಾರಿಗಳನ್ನು ದಾಳಿ ಮಾಡಿ ಹತ್ಯೆಗೈದಿದ್ದಾರೆ.
ಇದನ್ನೂ ಓದಿ: ಕಾಬೂಲ್ ಮಿಲಿಟರಿ ವಿಮಾನ ನಿಲ್ದಾಣ ಬಳಿ ಭಾರಿ ಸ್ಫೋಟ.. 10 ಮಂದಿ ಸಾವು