ನವದೆಹಲಿ: ಭಾರತದಲ್ಲಿ ಆಫ್ಘಾನಿಸ್ತಾದ ರಾಯಭಾರಿ ಕಚೇರಿಯನ್ನು ಶಾಶ್ವತವಾಗಿ ಮುಚ್ಚಲಾಗುವುದು ಎಂದು ಘೋಷಿಸಿದ ಒಂದು ದಿನದ ಬಳಿಕ ರಾಜತಾಂತ್ರಿಕ ಸಂಬಂಧವನ್ನು ಮುಂದುವರಿಸಲಾಗುವುದು ಎಂದು ತಾಲಿಬಾನ್ ಸರ್ಕಾರ ಹೇಳಿದೆ. ಮುಂಬೈ ಮತ್ತು ಹೈದರಾಬಾದ್ನಲ್ಲಿರುವ ಕಾನ್ಸುಲೇಟ್ಗಳು ನವೆಂಬರ್ 27 ರಿಂದ ಕಾರ್ಯಾಚರಣೆ ನಡೆಸಲಿವೆ ಎಂದು ಭಾರತದ ವಿದೇಶಾಂಗ ಇಲಾಖೆ 'ಈಟಿವಿ ಭಾರತ್'ಗೆ ತಿಳಿಸಿದೆ.
ಮೊನ್ನೆಯಷ್ಟೇ ಭಾರತದ ದೆಹಲಿಯಲ್ಲಿನ ರಾಯಭಾರಿ ಕಚೇರಿಯನ್ನು ಮುಚ್ಚಲಾಗುವುದು ಎಂದು ತನ್ನ ಅಧಿಕಾರಿಗಳನ್ನು ತಾಲಿಬಾನ್ ಸರ್ಕಾರ ವಾಪಸ್ ಕರೆಸಿಕೊಂಡಿತ್ತು. ಇದು ಘೋಷಿಸಿದ ಒಂದು ದಿನದಲ್ಲೇ ಆದೇಶ ಪರಿಷ್ಕರಿಸಿದ್ದು, ಭಾರತದೊಂದಿಗಿನ ರಾಜತಾಂತ್ರಿಕತೆಯನ್ನು ಮುಂದುವರಿಸಿ, ಮುಂಬೈ, ಹೈದರಾಬಾದ್ ಸೇರಿದಂತೆ ದೆಹಲಿಯಲ್ಲಿ ಕಚೇರಿಯನ್ನು ಮರು ಆರಂಭಿಸಲಾಗುವುದು ಎಂದಿದೆ. ಆದಾಗ್ಯೂ, ತಾಲಿಬಾನ್ ಸರ್ಕಾರ ನಿಯೋಜಿಸಿರುವ ಆಫ್ಘನ್‌ನ ಯಾವುದೇ ಅಧಿಕಾರಿಗೆ ಸದ್ಯಕ್ಕೆ ಯಾವುದೇ ಅಧಿಕಾರ, ಕೆಲಸವನ್ನು ನೀಡಿಲ್ಲ.
ದೆಹಲಿ ರಾಯಭಾರ ಕಚೇರಿಯನ್ನು ಮುಚ್ಚಲಾಗಿದ್ದರೂ, ಮುಂಬೈ ಮತ್ತು ಹೈದರಾಬಾದ್‌ನ ಕಾನ್ಸುಲೇಟ್‌ಗಳ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿರುವ ಮಾಹಿತಿ ಪ್ರಕಾರ, ಭಾರತದಲ್ಲಿನ ಆಫ್ಘನ್ ರಾಜತಾಂತ್ರಿಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಆದ್ದರಿಂದ, ನಾವು ಸೋಮವಾರದಿಂದ ನವದೆಹಲಿಯಲ್ಲಿ ರಾಯಭಾರ ಕಚೇರಿಯನ್ನು ಪುನಃ ತೆರೆಯುತ್ತೇವೆ. ಅದನ್ನು ನೋಡಿಕೊಳ್ಳಲಾಗುವುದು. ಮುಂಬೈ ಮತ್ತು ಹೈದರಾಬಾದ್ ಕಾನ್ಸುಲೇಟ್‌ಗಳ ರಾಜತಾಂತ್ರಿಕರಾದ ಝಕಿಯಾ ವಾರ್ಡಕ್ (ಮುಂಬೈ) ಮತ್ತು ಇಬ್ರಾಹಿಂಖಿಲ್ (ಹೈದರಾಬಾದ್) ತಮ್ಮ ಸ್ಥಾನಗಳಲ್ಲಿ ಮುಂದುವರಿಯಲಿದ್ದಾರೆ ಎಂದಿದೆ.
ರಾಯಭಾರಿ ಕಚೇರಿ ಮತ್ತು ಹೊಸ ರಾಯಭಾರಿ ಆಯ್ಕೆಯ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಆಫ್ಘನ್ ಅಧಿಕಾರಿಗಳು, ಸದ್ಯಕ್ಕೆ ನಮಗೆ ಪೂರ್ಣಾವಧಿಯ ರಾಯಭಾರಿ ಇಲ್ಲ. ಆದರೆ ಮುಂಬೈ ಅಥವಾ ಹೈದರಾಬಾದ್ ಕಾನ್ಸುಲೇಟ್‌ನಿಂದ ಇನ್ಚಾರ್ಜ್ ಇರುತ್ತಾರೆ ಎಂದಿದ್ದಾರೆ. ಆಫ್ಘಾನಿಸ್ತಾನದ ಎಲ್ಲಾ ರಾಜತಾಂತ್ರಿಕರು ಭಾರತವನ್ನು ತೊರೆದಿದ್ದಾರೆ. ತಾಲಿಬಾನ್‌ನೊಂದಿಗೆ ಸಂಬಂಧ ಹೊಂದಿರುವವರು ಮಾತ್ರ ಇನ್ನೂ ಉಳಿದುಕೊಂಡಿದ್ದಾರೆ ಎಂದು ಮಾಜಿ ರಾಯಭಾರಿ ಫರೀದ್ ಮಮುಂಡ್‌ಜಾಯ್ ತಮ್ಮ ಪತ್ರದಲ್ಲಿ ಬರೆದಿರುವುದು ಗಮನಾರ್ಹ ಸಂಗತಿ.
ಆಫ್ಘನ್ ರಾಯಭಾರಿಗಳ ಕಲಹ: 2020 ರಿಂದ ಆಫ್ಘನ್ ರಾಯಭಾರ ಕಚೇರಿಯಲ್ಲಿ ಟ್ರೇಡ್ ಕೌನ್ಸಿಲರ್ ಆಗಿ ಕೆಲಸ ಮಾಡುತ್ತಿದ್ದ ಖಾದಿರ್ ಶಾ ಅವರನ್ನು ಏಪ್ರಿಲ್‌ನಲ್ಲಿ ತಾಲಿಬಾನ್ ಮಿಷನ್ ಮುಖ್ಯಸ್ಥರನ್ನಾಗಿ ನೇಮಿಸಲಾಗಿತ್ತು. ಆದರೆ, ಇದನ್ನು ಇತರ ಅಧಿಕಾರಿಗಳು ಆಕ್ಷೇಪಿಸಿದ್ದರು. ಮಿಷನ್‌ನಲ್ಲಿ ಅವರ ಉಪಸ್ಥಿತಿಯಿಂದಾಗಿ ಇತರ ರಾಜತಾಂತ್ರಿಕರ ಮಧ್ಯೆ ಮನಸ್ತಾಪ ಉಂಟಾಗಿತ್ತು. ಇದು ರಾಯಭಾರ ಕಚೇರಿಯೊಳಗಿನ ಆಂತರಿಕ ಸಂಘರ್ಷವನ್ನು ಹೆಚ್ಚಿಸಿತ್ತು.
ಆಫ್ಘನ್ ಮಿಷನ್ ಮುಖ್ಯಸ್ಥ ಖಾದಿರ್ ಶಾ ಸದ್ಯಕ್ಕೆ ದೆಹಲಿಯಲ್ಲಿದ್ದಾರೆಯೇ ಅಥವಾ ಭಾರತದ ಬೇರೆಡೆ ಇದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲ. ಮಾಜಿ ರಾಯಭಾರಿ ಹಂಚಿಕೊಂಡಿರುವ ಪತ್ರವು ಸುಳ್ಳಿನಿಂದ ಕೂಡಿದೆ. ನವದೆಹಲಿ ಎಂದಿಗೂ ತಾಲಿಬಾನ್‌ಗೆ ಸಂಬಂಧಿಸಿದ ರಾಯಭಾರಿಯನ್ನು ನೇಮಿಸುವುದಿಲ್ಲ. ಎಲ್ಲಾ ಆಫ್ಘನ್ ಡಿಪ್ಲೋಮಾಗಳು ಈಗಲೂ ಭಾರತದಲ್ಲಿದ್ದು, ಅವರೆಲ್ಲಾ ಹಿಂದಿನ ಅಧ್ಯಕ್ಷ ಅಶ್ರಫ್ ಘನಿ ಅವರಿಂದ ನೇಮಕಗೊಂಡವರು. ಕಳೆದ ಮೂರು ತಿಂಗಳಿನಿಂದ 18 ಸಿಬ್ಬಂದಿಗೆ ವೇತನ ನೀಡಿಲ್ಲ. ಆದ್ದರಿಂದ ಅವರು ರಾಯಭಾರಿಗಳಾಗಿ ಮುಂದುವರಿಯಲು ನಿರಾಕರಿಸಿದ್ದರು. ಸದ್ಯಕ್ಕೆ ಈ ಸಮಸ್ಯೆಯನ್ನು ಸರ್ಕಾರ ನೋಡಿಕೊಳ್ಳುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಫ್ಘನ್ನಲ್ಲಿ ಭಾರತದ ಅಧಿಕಾರಿಗಳಿಲ್ಲ: ಭಾರತ 2021 ರಲ್ಲಿ ಅಫ್ಘಾನಿಸ್ತಾನದಿಂದ ತನ್ನ ರಾಯಭಾರಿ ಅಧಿಕಾರಿಗಳನ್ನು ವಾಪಸ್ ಕರೆಸಿಕೊಂಡಿದೆ. ಇದಾದ ನಂತರ ಅಫ್ಘಾನಿಸ್ತಾನದಲ್ಲಿ ಯಾವುದೇ ಭಾರತೀಯ ರಾಜತಾಂತ್ರಿಕರು ಇಲ್ಲ. ಭಾರತದಲ್ಲಿ ನಡೆಯುತ್ತಿದ್ದ ರಾಯಭಾರಿ ಕಚೇರಿಯು ಉಚ್ಛಾಟಿತ ಆಫ್ಘನ್ ಅಧ್ಯಕ್ಷ ಅಶ್ರಫ್ ಘನಿ ಅವರ ಹಿಂದಿನ ಸರ್ಕಾರವು ನೇಮಿಸಿದ ಸಿಬ್ಬಂದಿಯ ಸಹಾಯದಿಂದ, ಭಾರತೀಯ ಅಧಿಕಾರಿಗಳ ಅನುಮತಿಯೊಂದಿಗೆ ನಡೆಯುತ್ತಿತ್ತು.
ಇದನ್ನೂ ಓದಿ: ಭಾರತದಲ್ಲಿ ರಾಯಭಾರ ಕಚೇರಿ ಮುಚ್ಚಿದ ಅಫ್ಘಾನಿಸ್ತಾನ