ಗಾಜಾ (ಪ್ಯಾಲೆಸ್ತೀನ್): ಪ್ಯಾಲೆಸ್ತೀನ್ ಪ್ರತಿಭಟನಾಕಾರರು ಮತ್ತು ಇಸ್ರೇಲ್ ಸೈನಿಕರ ನಡುವೆ ಕಳೆದ ರಾತ್ರಿ ನಡೆದ ಘರ್ಷಣೆಯಲ್ಲಿ ಏಳು ಮಂದಿ ಗಾಯಗೊಂಡಿದ್ದಾರೆ. ಕಳೆದ ಎರಡು ವರ್ಷಗಳ ಬಳಿಕ ಮೊದಲ ಬಾರಿಗೆ ಪೂರ್ವ ಗಾಜಾ ಪಟ್ಟಿ ಮತ್ತು ಇಸ್ರೇಲ್ ಗಡಿಯಲ್ಲಿ ಘರ್ಷಣೆ ಪುನರಾರಂಭಗೊಂಡಿದೆ. ರಾತ್ರಿ ವೇಳೆ ಆಗಮಿಸಿದ ಪ್ರತಿಭಟನಾಕಾರರು ಟೈರ್ಗಳನ್ನು ಸುಟ್ಟು ಹಾಕಿ, ಬಳಿಕ ನಾಡ ಬಂದೂಕುಗಳ ಮೂಲಕ ಇಸ್ರೇಲ್ ಸೈನಿಕ ಮೇಲೆ ದಾಳಿ ನಡೆಸಲು ಮುಂದಾಗಿದ್ದಾರೆ.
ಈ ಸಂದರ್ಭದಲ್ಲಿ ಇಸ್ರೇಲ್ ಸೈನಿಕರು ಗುಂಡು ಹಾರಿಸಿ, ಸಣ್ಣ ಡ್ರೋನ್‌ಗಳ ಸಹಾಯದಿಂದ ಅಶ್ರುವಾಯು ಸಿಡಿಸಿ ಪ್ರತಿಭಟನಾಕಾರರನ್ನು ಚದುರಿಸಲು ಯತ್ನಿಸಿದರು. ಇಸ್ರೇಲ್ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ಗಡಿಯಲ್ಲಿ ಉದ್ವಿಗ್ನತೆ ಸೃಷ್ಟಿಸಿದರು. ಇದೇ ಸಂದರ್ಭದಲ್ಲಿ ನಡೆದ ಗುಂಡಿನ ದಾಳಿಯಲ್ಲಿ 7 ಮಂದಿ ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ. ಒರ್ವನ ತಲೆಗೆ ಗುಂಡು ತಗುಲಿದ್ದು, ಆತನ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: ಇಸ್ರೇಲ್ ಸೈನಿಕರು, ಪ್ಯಾಲೆಸ್ತೀನ್ ಪ್ರತಿಭಟನಾಕಾರರ ನಡುವೆ ಘರ್ಷಣೆ: ಹಲವರಿಗೆ ಗಾಯ
ಇಸ್ರೇಲ್ ಗಡಿ ಬಳಿ ಪ್ರತಿಭಟನೆಗಳನ್ನು ಪುನರಾರಂಭಿಸುವ ನಿರ್ಧಾರವನ್ನು ಶನಿವಾರ ಮುಂಜಾನೆ ಇಸ್ಲಾಮಿಕ್ ಪ್ರತಿರೋಧ ಚಳುವಳಿ (ಹಮಾಸ್) ಸೇರಿದಂತೆ ವಿವಿಧ ಪ್ಯಾಲೆಸ್ಟೀನಿಯನ್ ಬಣಗಳನ್ನು ಒಳಗೊಂಡ 'ದಿ ನೈಟ್ ಡಿಸ್ಟರ್ಬೆನ್ಸ್ ಯೂನಿಟ್' ಸದಸ್ಯರು ತೆಗೆದುಕೊಂಡಿದ್ದರು.
ಕಳೆದ ಮೇನಲ್ಲಿ ಜೆರುಸಲೇಂನ ಅಲ್-ಅಕ್ಸಾ ಮಸೀದಿ ವಿಚಾರದಲ್ಲಿ ಉಭಯ ರಾಷ್ಟ್ರಗಳ ನಡುವೆ ಉಂಟಾಗಿದ್ದ ಯುದ್ಧದಲ್ಲಿ 250ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಸಾವಿರಾರು ಜನರು ಗಾಯಗೊಂಡಿದ್ದರು. ಸತತ 11 ದಿನಗಳ ಯುದ್ಧದ ಬಳಿಕ ಕದನ ವಿರಾಮ ಘೋಷಿಸಿಕೊಂಡಿದ್ದವು. ಆನಂತರ ಪ್ಯಾಲೆಸ್ತೀನ್ಗೆ ಸೇರಿದ ಪ್ರದೇಶವನ್ನು ಇಸ್ರೇಲ್ ವಶಪಡಿಸಿಕೊಳ್ಳುವುದನ್ನು ವಿರೋಧಿಸಿ ಪ್ರತಿ ಶುಕ್ರವಾರ ಅಲ್ಲಿನ ಜನರು ರ‍್ಯಾಲಿ ಮತ್ತು ಪ್ರತಿಭಟನೆಗಳನ್ನು ನಡೆಸುತ್ತಾ ಬಂದಿದ್ದರು.