ಕೀವ್: ನಾಳೆಗೆ ಬರೋಬ್ಬರಿ ಒಂದು ತಿಂಗಳು ಪೂರೈಸುತ್ತಿರುವ ರಷ್ಯಾ - ಉಕ್ರೇನ್ ಯುದ್ಧವನ್ನು ಪುಟಿಸ್ ಸೇನಾ ಮತ್ತಷ್ಟು ತೀವ್ರಗೊಳಿಸಿದೆ. ಮರಿಯುಪೋಲ್‌ನಲ್ಲಿ ನಾಗರಿಕರನ್ನು ರಕ್ಷಿಸಲು ಉಕ್ರೇನ್ ಅಧಿಕಾರಿಗಳು ಹೊಸ ಪ್ರಯತ್ನ ಮಾಡುತ್ತಿದ್ದಾಗ ರಷ್ಯಾ ಪಡೆಗಳು ನಿನ್ನೆ ಸೂಪರ್ ಪವರ್‌ಫುಲ್ ಬಾಂಬ್‌ಗಳ ದಾಳಿ ನಡೆಸಿದ್ದಾರೆ.
ದಾಳಿಯಿಂದಾಗಿ 200,000 ಕ್ಕೂ ಹೆಚ್ಚು ಜನರು ನಗರದ ಆಯಕಟ್ಟಿನ ಪ್ರದೇಶಗಳಲ್ಲಿ ಸಿಕ್ಕಿಬಿದ್ದಿದ್ದಾರೆ. ಮೃತ ದೇಹಗಳು ಹಾಗೂ ನಾಶವಾದ ಕಟ್ಟಡಗಳಿಂದ ಹೆಪ್ಪುಗಟ್ಟುವ ನರಕದೃಶ್ಯ ನಿರ್ಮಾಣವಾಗಿದೆ ಎಂದು ಅಲ್ಲಿನ ಸ್ಥಳೀಯ ಅಧಿಕಾರಿಯೊಬ್ಬರು ನೀಡಿದ ಅಂಕಿ- ಅಂಶಗಳನ್ನು ಉಲ್ಲೇಖಿಸಿ ಹ್ಯೂಮನ್ ರೈಟ್ಸ್ ವಾಚ್ ವರದಿ ಮಾಡಿದೆ.
ಎಲ್ಲರಿಗೂ ಸಾಕಷ್ಟು ಸ್ಥಳಾವಕಾಶವಿಲ್ಲ ಎಂಬುದು ತಿಳಿದಿದೆ. ಆದರೆ, ನಾವು ಮರಿಯುಪೋಲ್‌ನ ಎಲ್ಲ ನಿವಾಸಿಗಳನ್ನು ಸ್ಥಳಾಂತರಿಸಲು ಪ್ರಯತ್ನಿಸುತ್ತೇವೆ ಎಂದು ಉಪ ಪ್ರಧಾನ ಮಂತ್ರಿ ಐರಿನಾ ವೆರೆಶ್‌ಚುಕ್ ವೀಡಿಯೊ ಭಾಷಣದಲ್ಲಿ ತಿಳಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವಾಗಲೂ ಎರಡು ಸೂಪರ್ ಪವರ್‌ಫುಲ್ ಬಾಂಬ್‌ಗಳು ನಗರಕ್ಕೆ ಅಪ್ಪಳಿಸಿದವು ಎಂದು ಮರಿಯುಪೋಲ್ ಸ್ಥಳೀಯ ಅಧಿಕಾರಿಗಳು ತಿಳಿಸಿದ್ದು, ತಕ್ಷಣದ ಸಾವುನೋವುಗಳ ಲೆಕ್ಕವನ್ನು ನೀಡಲಿಲ್ಲ. ರಷ್ಯಾ ಸೈನಿಕರು ಮರಿಯುಪೋಲ್ ನಗರದ ಬಗ್ಗೆ ಆಸಕ್ತಿ ಹೊಂದಿಲ್ಲ ಎಂಬುದು ಸ್ಪಷ್ಟವಾಗಿದೆ, ಆದರೂ ನಗರವನ್ನು ನೆಲಕ್ಕೆ ಕೆಡವಲು, ಬೂದಿ ಮಾಡಲು ಬಯಸುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ: ಆಕ್ರಮಣಕಾರಿ ರಷ್ಯಾಗೆ ನಿರ್ಬಂಧ ಹೇರಲು ಕ್ವಾಡ್ ದೇಶಗಳ ಪೈಕಿ ಭಾರತ ಸ್ವಲ್ಪ ಹಿಂದೇಟು ಹಾಕ್ತಿದೆ - ಬೈಡನ್