ವಾಷಿಂಗ್ಟನ್: ರಷ್ಯಾ - ಉಕ್ರೇನ್ ಸಂಘರ್ಷ 12ನೇ ದಿನಕ್ಕೆ ಕಾಲಿಟ್ಟಿದೆ. ರಷ್ಯಾದ ಪಡೆಗಳು ಉಕ್ರೇನ್ ನಗರಗಳನ್ನು ಸುತ್ತುವರೆದಿವೆ. ಬಂದರು ನಗರವಾದ ಮರಿಯುಪೋಲ್‌ನ ನಿವಾಸಿಗಳಿಗೆ ಸುರಕ್ಷಿತ - ಮಾರ್ಗದ ಕಾರಿಡಾರ್‌ಗಳನ್ನು ಮತ್ತೆ ತೆರೆಯಲಾಗುವುದು ಎಂದು ರಷ್ಯಾದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಯುದ್ಧದ ಪ್ರಮುಖ ಬೆಳವಣಿಗೆಗಳ ವಿವರ ಹೀಗಿದೆ
- ಉಕ್ರೇನ್‌ನಲ್ಲಿ ಭಾರತೀಯರ ಸ್ಥಳಾಂತರ: ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಉಕ್ರೇನ್‌ನಲ್ಲಿ ಸಿಲುಕಿರುವ ಎಲ್ಲ ಪ್ರಜೆಗಳಿಗೆ ತಕ್ಷಣದ ಸ್ಥಳಾಂತರಿಸುವಿಕೆಗಾಗಿ ಅವರ ಎಲ್ಲ ವಿವರಗಳೊಂದಿಗೆ 'ಗೂಗಲ್ ಫಾರ್ಮ್' ಅನ್ನು ತುರ್ತಾಗಿ ತುಂಬಲು ಕೇಳಿದೆ. ಭಾರತೀಯ ರಾಯಭಾರಿ ಕಚೇರಿಯ ಅಧಿಕೃತ ಟ್ವಿಟರ್ ಖಾತೆಯು ಹೆಸರು, ಪಾಸ್‌ಪೋರ್ಟ್ ಸಂಖ್ಯೆ ಮತ್ತು ಪ್ರಸ್ತುತ ಸ್ಥಳದಂತಹ ಮೂಲ ವಿವರಗಳನ್ನು ಕೇಳುವ ಗೂಗಲ್ ಫಾರ್ಮ್ ಅನ್ನು ಪೋಸ್ಟ್ ಮಾಡಿದೆ.
ಭಾರತೀಯ ಪ್ರಜೆಗಳು ತಮ್ಮ ಇ - ಮೇಲ್ ಐಡಿ, ಪೂರ್ಣ ಹೆಸರು, ವಯಸ್ಸು, ಲಿಂಗ, ಪಾಸ್‌ಪೋರ್ಟ್ ಸಂಖ್ಯೆ, ಉಕ್ರೇನ್‌ನಲ್ಲಿರುವ ವಿಳಾಸ, ಉಕ್ರೇನ್‌ನಲ್ಲಿರುವ ಸಂಪರ್ಕ ಸಂಖ್ಯೆ ಮತ್ತು ಭಾರತದಲ್ಲಿನ ಸಂಪರ್ಕ ಸಂಖ್ಯೆಯನ್ನು ನಮೂದಿಸಲು ಗೂಗಲ್ ಫಾರ್ಮ್ ಅಗತ್ಯವಿದೆ.
- ನಿರಾಶ್ರಿತರ ಸಂಖ್ಯೆ 1.5 ಮಿಲಿಯನ್‌ಗೆ ಏರುವ ಸಾಧ್ಯತೆ: ಉಕ್ರೇನ್‌ನಲ್ಲಿ ಪರಿಸ್ಥಿತಿ ಭೀಕರವಾಗಿದೆ ಮತ್ತು ರಷ್ಯಾದ ಆಕ್ರಮಣದಿಂದ ಪಲಾಯನ ಮಾಡುವ ನಿರಾಶ್ರಿತರ ಸಂಖ್ಯೆ ವಾರಾಂತ್ಯದ ಅಂತ್ಯದ ವೇಳೆಗೆ ಪ್ರಸ್ತುತ 1.3 ಮಿಲಿಯನ್‌ನಿಂದ 1.5 ಮಿಲಿಯನ್‌ಗೆ ಏರಬಹುದು ಎಂದು ಯುಎನ್ ನಿರಾಶ್ರಿತರ ಏಜೆನ್ಸಿಯ ಮುಖ್ಯಸ್ಥರು ಹೇಳಿದ್ದಾರೆ.
ಎರಡನೇಯ ಮಹಾಯುದ್ಧದ ನಂತರ ಯುರೋಪ್‌ನಲ್ಲಿ ನಾವು ನೋಡಿದ ಅತ್ಯಂತ ವೇಗವಾಗಿ ಚಲಿಸುತ್ತಿರುವ ನಿರಾಶ್ರಿತರ ಬಿಕ್ಕಟ್ಟು ಇದು ಎಂದು ಯುಎನ್ಹೆಚ್ಸಿಆರ್ (UNHCR) ಮುಖ್ಯಸ್ಥ ಫಿಲಿಪ್ಪೊ ಗ್ರಾಂಡಿ ಹೇಳಿದ್ದಾರೆ.
- ಯುಕ್ರೇನ್ ನೆಲದಲ್ಲಿ ಏನಾಗುತ್ತಿದೆ?: ರಷ್ಯಾದ ಪಡೆಗಳು ದೇಶಾದ್ಯಂತ ನೂರಾರು ಕ್ಷಿಪಣಿಗಳು ಮತ್ತು ಫಿರಂಗಿ ದಾಳಿಗಳನ್ನು ಪ್ರಾರಂಭಿಸಿವೆ. ಕೀವ್ನಿಂದ ರಾಜಧಾನಿಯ ಉತ್ತರದ ನಗರವಾದ ಚೆರ್ನಿಹಿವ್‌ನ ವಸತಿ ಪ್ರದೇಶಗಳ ಮೇಲೆ ಬಾಂಬ್ ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ಉಕ್ರೇನಿಯನ್ ಪಡೆಗಳು ದೇಶದ ಮಧ್ಯ ಮತ್ತು ಆಗ್ನೇಯ ಭಾಗದಲ್ಲಿ ಪ್ರಮುಖ ನಗರಗಳನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿವೆ. ಆದರೆ ರಷ್ಯನ್ನರು ಖಾರ್ಕಿವ್, ಮೈಕೊಲೈವ್, ಚೆರ್ನಿಹಿವ್ ಮತ್ತು ಸುಮಿಯನ್ನು ಸುತ್ತುವರಿಯಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.
ಅಲ್ಲದೇ ಉಕ್ರೇನಿಯನ್ ಪಡೆಗಳು ಉಕ್ರೇನ್‌ನ ಅತಿದೊಡ್ಡ ಬಂದರು ನಗರವಾದ ಒಡೆಸಾವನ್ನು ರಷ್ಯಾದ ಸೇನೆಯಿಂದ ರಕ್ಷಿಸುತ್ತಿವೆ ಎಂದು ಉಕ್ರೇನಿಯನ್ ಅಧ್ಯಕ್ಷೀಯ ಸಲಹೆಗಾರ ಒಲೆಕ್ಸಿ ಅರೆಸ್ಟೋವಿಚ್ ಹೇಳಿದ್ದಾರೆ.
- ರಾಜತಾಂತ್ರಿಕ ಪ್ರಯತ್ನಗಳು: ರಷ್ಯಾ ಮತ್ತು ಉಕ್ರೇನ್ ನಡುವೆ ಮೂರನೇ ಸುತ್ತಿನ ಮಾತುಕತೆ ಸೋಮವಾರ ನಡೆಯಲಿದೆ ಎಂದು ಉಕ್ರೇನ್ ನಿಯೋಗದ ಸದಸ್ಯ ಡೇವಿಡ್ ಅರಾಖಮಿಯಾ ತಿಳಿಸಿದ್ದಾರೆ.
- ಜಲವಿದ್ಯುತ್ ಸ್ಥಾವರವನ್ನು ವಶಪಡಿಸಿಕೊಳ್ಳಲು ರಷ್ಯಾ ಯತ್ನ: ರಷ್ಯಾದ ಪಡೆಗಳು ಕಣಿವ್ ಜಲವಿದ್ಯುತ್ ಕೇಂದ್ರವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಬಹುದು ಎಂದು ಉಕ್ರೇನ್ ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಕಳೆದ ವಾರ, ರಷ್ಯಾದ ಪಡೆಗಳು ಯುರೋಪಿನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರವನ್ನು ಭಾಗಶಃ ಆಕ್ರಮಿಸಿಕೊಂಡಿದ್ದವು. ಯುದ್ಧದಲ್ಲಿ ತನ್ನ ಮುಖ್ಯ ಗುರಿಯು ಉಕ್ರೇನಿಯನ್ ಮಿಲಿಟರಿ ಸೌಲಭ್ಯಗಳನ್ನು ಗುರಿಯಾಗಿಸುವುದು ಎಂದು ರಷ್ಯಾ ಹೇಳಿದೆ.
- 9,22,400 ನಿರಾಶ್ರಿತರು ಗಡಿಯನ್ನು ದಾಟಿದ್ದಾರೆ - ಪೋಲೆಂಡ್: ಪೋಲೆಂಡ್‌ನ ಗಡಿ ಅಧಿಕಾರಿಗಳು ಶನಿವಾರ ಉಕ್ರೇನ್‌ನಿಂದ ದಾಖಲೆಯ 1,29,000 ಜನರು ಮತ್ತು ಭಾನುವಾರ ಮುಂಜಾನೆ 39,800 ತನ್ನ ಗಡಿಯನ್ನು ದಾಟಿದ್ದಾರೆ ಎಂದು ಹೇಳಿದ್ದಾರೆ. ರಷ್ಯಾ ಉಕ್ರೇನ್ ಆಕ್ರಮಣದ ನಂತರ 9,22,400 ಜನರು ಉಕ್ರೇನ್‌ನಿಂದ ಪೋಲೆಂಡ್‌ಗೆ ಪಲಾಯನ ಮಾಡಿದ್ದಾರೆ.
- ಹಿಂಸಾಚಾರಕ್ಕೆ ಖಂಡನೆ: ಯುಕೆ ಪಿಎಂ ಬೋರಿಸ್ ಜಾನ್ಸನ್ ಪುಟಿನ್ ಅವರ ಈ ಹಿಂಸಾಚಾರವನ್ನು ಖಂಡಿಸಿದ್ದಾರೆ. ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಆಕ್ರಮಣವು ಈಗ "ಯುದ್ಧಾಪರಾಧಗಳು ಮತ್ತು ನಾಗರಿಕರ ವಿರುದ್ಧ ಯೋಚಿಸಲಾಗದ ಹಿಂಸಾಚಾರದ ಕ್ರೂರ ಅಭಿಯಾನದಲ್ಲಿ ಮುಳುಗುತ್ತಿದೆ" ಎಂದು ಹೇಳಿದ್ದಾರೆ.
- ತಾತ್ಕಾಲಿಕ ಕದನ ವಿರಾಮ ಉಲ್ಲಂಘನೆ: ತಾತ್ಕಾಲಿಕ ಕದನ ವಿರಾಮವನ್ನು ರಷ್ಯಾದ ಪಡೆಗಳು ಉಲ್ಲಂಘಿಸಿವೆ ಎಂದು ಉಕ್ರೇನ್ ಆರೋಪಿಸಿದೆ.
ಇದನ್ನೂ ಓದಿ: ಸುಮ್ಮನೇ ಶರಣಾಗಿ.. ಇಲ್ಲ ಸರ್ವನಾಶವಾಗ್ತೀರಿ ಎಂದ ಪುಟಿನ್.. ಪ್ರಾಣ ಬಿಡ್ತೀವಿ ಹೊರತು ತಲೆಬಾಗಲ್ಲ ಎಂದ ಝೆಲೆನ್ಸ್ಕಿ