ಪ್ಯಾರಿಸ್: ಫ್ರಾನ್ಸ್‌ನಲ್ಲಿ ಕೋವಿಡ್ ಸೋಂಕಿನ ಮೂರನೇ ಅಲೆ ಭಾರಿ ಪ್ರಭಾವ ಬೀರುತ್ತಿದೆ. ರಾಜಧಾನಿ ಪ್ಯಾರಿಸ್ ಸೇರಿದಂತೆ ಹಲವು ನಗರಗಳಲ್ಲಿ ಸೋಂಕು ಪ್ರಕರಣಗಳು ಉಲ್ಬಣಿಸುತ್ತಿವೆ.
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 1,04,611 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ ಎಂದು ಅಲ್ಲಿನ ಸಾರ್ವಜನಿಕ ಆರೋಗ್ಯ ಇಲಾಖೆ ತಿಳಿಸಿದೆ.
ಜಗತ್ತಿನಲ್ಲಿ ಕೋವಿಡ್ ರೂಪಾಂತರಿ ತಳಿ ಒಮಿಕ್ರಾನ್ ಸೋಂಕು ಅತೀ ವೇಗವಾಗಿ ಹರಡುತ್ತಿದ್ದು, ಕೋವಿಡ್ ಸೋಂಕಿತರ ಸಂಖ್ಯೆಯೂ ಹೆಚ್ಚಳವಾಗುತ್ತಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಸೋಮವಾರ (ನಾಳೆ) ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮಾಕ್ರಾನ್ ಮತ್ತು ಸರ್ಕಾರದ ಪ್ರಮುಖ ಸದಸ್ಯರು ಕೋವಿಡ್ ಸುರಕ್ಷತಾ ಕ್ರಮಗಳ ಕುರಿತು ಸಾರ್ವಜನಿಕ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್ ಸೋಂಕು ಹರಡುತ್ತಿರುವುದರಿಂದ ಕಳೆದ ಶುಕ್ರವಾರದಿಂದ ಬೂಸ್ಟರ್ ಡೋಸ್ (ಮುನ್ನೆಚ್ಚರಿಕೆ ಲಸಿಕೆ) ನೀಡಲಾಗುತ್ತಿದೆ. ಆರೋಗ್ಯ ಪ್ರಾಧಿಕಾರ ಶಿಫಾರಸು ಮಾಡಿದ ವಯಸ್ಕರು ತಮ್ಮ ಆರಂಭಿಕ ವ್ಯಾಕ್ಸಿನೇಷನ್ ಪಡೆದ ಮೂರು ತಿಂಗಳ ನಂತರ ಬೂಸ್ಟರ್ ಡೋಸ್ ಹಾಕಿಸಿಕೊಳ್ಳುತ್ತಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ ದೇಶದಲ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲನೆ, ವ್ಯಾಕ್ಸಿನ್ ಕಡ್ಡಾಯಗೊಳಿಸಲಾಗಿದೆ. ಕಳೆದ ಡಿಸೆಂಬರ್ 4ರಂದು ಮೊದಲ ಬಾರಿಗೆ 50,000 ಹೊಸ ಕೋವಿಡ್ ಸೋಂಕಿತರು ಪತ್ತೆಯಾಗಿದ್ದರು. ಆ ನಂತರ ದೇಶದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ.
ಈವರೆಗೆ ಫ್ರಾನ್ಸ್‌ನಲ್ಲಿ ಒಟ್ಟು 122,546 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, ಶೇಕಡಾ 76.5ರಷ್ಟು ಜನರು ಸಂಪೂರ್ಣವಾಗಿ ಲಸಿಕೆ ಪಡೆದಿದ್ದಾರೆ.