ಜಿನೀವಾ: ಡೆಲ್ಟಾ ರೂಪಾಂತರ ವಿಶ್ವದಾದ್ಯಂತ ಅತಿ ವೇಗವಾಗಿ ಹರಡುತ್ತಿರುವುದಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಮಹಾ ನಿರ್ದೇಶಕ ಟೆಡ್ರೊಸ್ ಅಧಾನೊಮ್ ಕಳವಳ ವ್ಯಕ್ತಪಡಿಸಿದ್ದಾರೆ. ಕಳೆದ ನಾಲ್ಕು ವಾರಗಳಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾಗುತ್ತಿದ್ದರೂ, ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ ಎಂದು ಅವರು ಹೇಳಿದ್ದಾರೆ.
2020 ರ ಅಕ್ಟೋಬರ್ನಲ್ಲಿ ಭಾರತದಲ್ಲಿ ಪತ್ತೆಯಾದ ಡೆಲ್ಟಾ ರೂಪಾಂತರವು ಇದೀಗ ಜಗತ್ತಿನ 104 ರಾಷ್ಟ್ರಗಳಲ್ಲಿ ಪತ್ತೆಯಾಗಿದೆ. ಕೋವಿಡ್ಗಿಂತ ಅತಿ ವೇಗವಾಗಿ ಈ ವೈರಸ್ ವ್ಯಾಪಿಸುತ್ತಿದ್ದು, ಪ್ರಕರಣಗಳು ಹಾಗೂ ಸಾವಿನ ಪ್ರಮಾಣದಲ್ಲಿ ಯಥೇಚ್ಛವಾಗಿ ಏರಿಕೆಯಾಗುತ್ತಿದೆ ಎಂದು ಟೆಡ್ರೊಸ್ ತಿಳಿಸಿದ್ದಾರೆ.
ಡೆಲ್ಟಾ ರೂಪಾಂತರವು ವ್ಯಾಪಿಸುತ್ತಿದ್ದರೂ, ಜಗತ್ತಿನ ಹಲವು ರಾಷ್ಟ್ರಗಳಲ್ಲಿ ನಿಯಮಗಳನ್ನು ಸಡಿಲಿಕೆ ಮಾಡಲಾಗುತ್ತಿದೆ. ಫ್ರಾನ್ಸ್ನಲ್ಲಿ ಹೊಸ ನಿರ್ಬಂಧಗಳನ್ನು ಜಾರಿಗೆ ತಂದರೆ, ಬ್ರಿಟನ್ನಲ್ಲಿ ಜುಲೈ 19 ರಿಂದ ನಿಯಮಗಳನ್ನು ತೆಗೆದುಹಾಕಲು ಅಲ್ಲಿನ ಸರ್ಕಾರ ಆದೇಶಿಸಿದೆ. ನಿರ್ಬಂಧಗಳನ್ನು ತೆಗೆದುಹಾಕಿದ್ರೆ, ಸೋಂಕಿಗೆ ತಾವೇ ಆಹ್ವಾನ ಕೊಟ್ಟಂತಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯಪಟ್ಟಿದೆ.
ಪ್ರಪಂಚದ ಬಹುತೇಕ ಜನರು ಕೋವಿಡ್ ಲಸಿಕೆಗಳನ್ನು ಹಾಕಿಸಿಕೊಂಡಿಲ್ಲ. ಹಾಗಾಗಿ ನಿರ್ಬಂಧಗಳನ್ನು ಸಡಿಲಗೊಳಿಸುವುದು ಸೂಕ್ತವಲ್ಲ ಎಂದು ದೇಶಗಳಿಗೆ ಟೆಡ್ರೊಸ್ ಎಚ್ಚರಿಕೆ ನೀಡಿದ್ದಾರೆ.
ಕೋವಿಡ್ ಒಂದು ರೀತಿ ಕಾಡಿಗೆ ಬೆಂಕಿ ಬಿದ್ದಂತೆ. ಅಗ್ನಿಶಾಮಕ ಸಿಬ್ಬಂದಿ ಒಂದು ಕಡೆಯಿಂದ ಬೆಂಕಿ ನಂದಿಸುತ್ತಿದ್ದರೆ, ಜ್ವಾಲೆ ಮತ್ತೊಂದೆಡೆಗೆ ವ್ಯಾಪಿಸುತ್ತಿರುತ್ತದೆ. ಹಾಗೆಯೇ ಕೋವಿಡ್ ಜಗತ್ತಿನ ಒಂದು ಮೂಲೆಯಲ್ಲಿ ಕಡಿಮೆಯಾದರೆ ಮತ್ತೊಂದು ಭಾಗದಲ್ಲಿ ವ್ಯಾಪಕವಾಗಿ ಹರಡಿರುತ್ತದೆ. ಹಾಗಾಗಿ ಕೋವಿಡ್ನಿಂದ ರಕ್ಷಿಸಿಕೊಳ್ಳಬೇಕೆಂದರೆ, ನಿಯಮಗಳ ಪಾಲನೆ ಜತೆಗೆ ನಿರ್ಬಂಧಗಳನ್ನೂ ಪಾಲಿಸಬೇಕಿದೆ ಎಂದು ಜನತೆಗೆ ಕರೆ ಕೊಟ್ಟಿದ್ದಾರೆ.