ವಿಶ್ವಸಂಸ್ಥೆ: ಕೋವಿಡ್-19 ಮಹಾಮಾರಿಯನ್ನು ಸೋಲಿಸಲು ಭಾರತ ಸೇರಿದಂತೆ ವಿಶ್ವದ 188 ರಾಷ್ಟ್ರಗಳು ಒಗ್ಗಟ್ಟಿನ ಹೋರಾಟ ಮಾಡುವ ದೃಢ ಸಂಕಲ್ಪ ಮಾಡಿವೆ. ಜಗತ್ತಿನ ಎಲ್ಲ ರಾಷ್ಟ್ರಗಳ ಜನರ ಜೀವನ ಹಾಗೂ ಆರ್ಥಿಕ ವ್ಯವಸ್ಥೆಯನ್ನು ಬುಡಮೇಲು ಮಾಡುತ್ತಿರುವ ಕೋವಿಡ್ ವಿರುದ್ಧ ಒಂದಾಗಿ ಹೋರಾಡುವ ನಿರ್ಣಯವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಯಿತು.
ಕೊರೊನಾ ವೈರಸ್ ಕಾಯಿಲೆಯ ವಿರುದ್ಧ ಜಾಗತಿಕ ಒಗ್ಗಟ್ಟಿನ ಹೋರಾಟ (Global solidarity to fight the Coronavirus disease 2019) ಎಂಬ ಸಂಕಲ್ಪವನ್ನು 118 ರಾಷ್ಟ್ರಗಳು ವಿಶ್ವಸಂಸ್ಥೆಯಲ್ಲಿ ಕೈಗೊಂಡಿವೆ. ಕೊರೊನಾ ವೈರಸ್ನಿಂದ ಮಾನವ ಕುಲದ ಆರೋಗ್ಯ, ಸುರಕ್ಷತೆ ಹಾಗೂ ನೆಮ್ಮದಿಗೆ ಭಂಗ ಬಂದಿದೆ. ಈ ವೈರಸ್ನಿಂದ ಜಗತ್ತಿನಲ್ಲಿ ಹಿಂದೆಂದೂ ಕಾಣದಂಥ ಸಾಮಾಜಿಕ ಹಾಗೂ ಆರ್ಥಿಕ ದುಷ್ಪರಿಣಾಮಗಳು ಉಂಟಾಗುತ್ತಿವೆ. ಜನರ ಪ್ರಯಾಣ ಹಾಗೂ ವ್ಯಾಪಾರ ವ್ಯವಹಾರಗಳಿಗೂ ಅಡ್ಡಿಯಾಗಿರುವ ಇದರಿಂದ ಜನರ ಹೊಟ್ಟೆಪಾಡಿನ ಉದ್ಯೋಗಗಳು ಕಸಿಯುವಂತಾಗಿವೆ ಎಂಬ ಅಂಶಗಳನ್ನು ಈ ನಿರ್ಣಯದಲ್ಲಿ ಸೇರಿಸಲಾಗಿದೆ.
ಕೊರೊನಾ ವೈರಸ್ ಅನ್ನು ಮೂಲೋತ್ಪಾಟನೆ ಮಾಡಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾಹಿತಿ ವಿನಿಮಯ, ವೈಜ್ಞಾನಿಕ ಸಹಕಾರ ಏರ್ಪಡಿಸುವುದು ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಳನ್ವಯ ಕೆಲಸ ಮಾಡುವ ಕರೆಯನ್ನು ಈ ನಿರ್ಣಯದ ಮೂಲಕ ಕೊಡಲಾಗಿದೆ.