ಇಸ್ಲಾಮಾಬಾದ್: ಮಕ್ಕಳ ಮುಂದೆಯೇ ಇಬ್ಬರು ಪುರುಷರು ಮಹಿಳೆಯ ಮೇಲೆ ಅತ್ಯಾಚಾರವೆಸಗಿದ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ದೇಶದಲ್ಲಿ ಹೆಚ್ಚುತ್ತಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ತಡೆಯಲು ಅತ್ಯಾಚಾರ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಹೇಳಿದ್ದಾರೆ.
ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸುವುದು ಅಥವಾ ರಾಸಾಯನಿಕಗಳ ಮೂಲಕ ಕೊಲ್ಲುವ ಶಿಕ್ಷೆಯನ್ನು ವಿಧಿಸಬೇಕೆಂದು ಇಮ್ರಾನ್ ಖಾನ್ ಅಭಿಪ್ರಾಯಪಟ್ಟಿದ್ದಾರೆ. ಸ್ಥಳೀಯ ಟಿವಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿದ ಇಮ್ರಾನ್ ಖಾನ್, ಮೊಟೋರ್ವೇ ಸಾಮೂಹಿಕ ಅತ್ಯಾಚಾರ ಪ್ರಕರಣ ದೇಶವನ್ನೇ ಬೆಚ್ಚಿ ಬೀಳಿಸಿದೆ. ಅತ್ಯಾಚಾರಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಗಲ್ಲಿಗೇರಿಸಬೇಕು. ಮಕ್ಕಳ ಮೇಲೆ ದೌರ್ಜನ್ಯವೆಸಗುವವರಿಗೂ ಇದೇ ಶಿಕ್ಷೆ ನೀಡಬೇಕು ಎಂದಿದ್ದಾರೆ.
ಈ ರೀತಿಯ ಶಿಕ್ಷೆಯನ್ನು ಜಾರಿಗೊಳಿಸುವ ಬಗ್ಗೆ ನಾವು ಈ ಮೊದಲೇ ಸಂಪುಟದಲ್ಲಿ ಚರ್ಚೆ ಮಾಡಿದ್ದೆವು. ಆದರೆ ಈ ರೀತಿಯ ಶಿಕ್ಷೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ವೀಕಾರಾರ್ಹವಾಗುವುದಿಲ್ಲ. ಅಲ್ಲದೆ ಯುರೋಪಿಯನ್ ಒಕ್ಕೂಟವು ನಮಗೆ ನೀಡಿರುವ ಜೆಎಸ್ಪಿ-ಪ್ಲಸ್ ವ್ಯಾಪಾರ ಚಟುವಟಿಕೆಯ ಮೇಲೆ ಇದು ಪರಿಣಾಮ ಬೀರಲಿದೆ. ಆದರೆ ಇದಕ್ಕೆ ಪರ್ಯಾಯವಾಗಿ ಹೊಸ ನಿಯಮವನ್ನು ಜಾರಿಗೊಳಿಸುವ ಅಗತ್ಯವಿದೆ ಎಂದು ಖಾನ್ ಹೇಳಿದ್ದಾರೆ.