ವಾಷಿಂಗ್ಟನ್: ತಾಲಿಬಾನ್‌ಗಳು ಅಫ್ಘಾನಿಸ್ತಾನವನ್ನು ವಶಪಡಿಸಿಕೊಳ್ಳಲು ಪಾಕಿಸ್ತಾನ ಸಾವಿರಾರು ಉಗ್ರರನ್ನು ಅಲ್ಲಿಗೆ ರವಾನಿಸಿತ್ತು ಎಂಬ ಸುದ್ದಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಈ ಬಗ್ಗೆ ಮಾಹಿತಿ ನೀಡಿರುವ ಅಮೆರಿಕದ ಭದ್ರತಾ ಪ್ರಧಾನ ಕಚೇರಿ ಪೆಂಟಗನ್, ಅಫ್ಘಾನಿಸ್ತಾನ ವಶಪಡಿಸಿಕೊಳ್ಳಲು ತಾಲಿಬಾನಿಗಳಿಗೆ ಪಾಕಿಸ್ತಾನ ನೆರವಾಗಿತ್ತು ಎಂಬುದನ್ನು ದೃಢಪಡಿಸಲು ಯಾವುದೇ ಸಾಕ್ಷ್ಯಾಧಾರಗಳು ಇಲ್ಲ ಎಂದು ಹೇಳಿದೆ.
ತಾಲಿಬಾನ್‌ಗಳ ನೆರವಿಗೆ ಪಾಕಿಸ್ತಾನವು 10,000 ದಿಂದ 15,000 ಮಂದಿಯನ್ನು ರವಾನಿಸಿತ್ತು ಎಂದು ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಅಶ್ರಫ್ ಘನಿ ಆರೋಪಿಸಿದ್ದರು. ಆದರೆ, ಇದನ್ನು ದೃಢೀಕರಿಸುವ ಪುರಾವೆಗಳಿಲ್ಲ ಎಂದು ಪೆಂಟಗನ್ ಮಾಧ್ಯಮ ಕಾರ್ಯದರ್ಶಿ ಜಾನ್ ಕಿರ್ಬಿ ಸ್ಪಷ್ಟಪಡಿಸಿದ್ದಾರೆ.
ಈ ಮೊದಲು ಹೇಳಿದಂತೆ ಪಾಕಿಸ್ತಾನ ಕೂಡಾ ಅಫ್ಗನ್ ಗಡಿಯುದ್ಧಕ್ಕೂ ಸಮಾನ ಹಿತಾಸಕ್ತಿ ಹೊಂದಿದೆ. ಪಾಕ್ ಕೂಡಾ ಭಯೋತ್ಪಾದನೆಗೆ ತುತ್ತಾಗಿದೆ ಎಂದು ಹೇಳಿದ್ದಾರೆ. ಜೊತೆಗೆ ಪಾಕಿಸ್ತಾನದ ಪರಮಾಣು ಶಸ್ತ್ರಾಗಾರದ ಭದ್ರತೆ ಕುರಿತು ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಅವರಿಂದ ವರದಿ ಕೋರಲಾಗಿದೆ. ಈ ಸಂಬಂಧ ರಾಷ್ಟ್ರೀಯ ರಕ್ಷಣಾ ಅಧಿಕಾರ ಕಾಯ್ದೆಗೆ ತಿದ್ದುಪಡಿಯನ್ನು ಕಾಂಗ್ರೆಸ್‌ನ ಪ್ರಮುಖ ಸಮಿತಿಯು ಸರ್ವಾನುಮತದಿಂದ ಅಂಗೀಕರಿಸಿದೆ. ರಿಪಬ್ಲಿಕನ್ ಕಾಂಗ್ರೆಸ್‌ನ ಲಿಜ್ ಚೆನಿ ಅವರು ತಂದ ತಿದ್ದುಪಡಿಯನ್ನು ಹೌಸ್ ಆರ್ಮ್ಡ್ ಸರ್ವಿಸಸ್ ಕಮಿಟಿ ಬುಧವಾರ ಧ್ವನಿ ಮತದ ಮೂಲಕ ಅಂಗೀಕರಿಸಿತು.
ಇದನ್ನೂ ಓದಿ: 3 ದಿನಗಳಲ್ಲಿ ತಾಲಿಬಾನ್ ಸರ್ಕಾರ: ಸರ್ವೋಚ್ಚ ನಾಯಕ ಅಖುಂಡ್ಜಾಡಾ