ಕೊಲಂಬೋ : ತೈಲ ಹಾಗೂ ಇಂಧನ ಬಿಕ್ಕಟ್ಟು ಎದುರಿಸುತ್ತಿರುವ ನೆರೆಯ ದ್ವೀಪ ರಾಷ್ಟ್ರ ಶ್ರೀಲಂಕಾಗೆ ಕೇಂದ್ರ ಸರ್ಕಾರ ನೆರವಿನ ಹಸ್ತ ಚಾಚಿದೆ. ತೈಲ ಖರೀದಿಗಾಗಿ 500 ಮಿಲಿಯನ್ ಡಾಲರ್ ಸಾಲ ನೀಡುವ ಘೋಷಣೆ ಮಾಡಿದೆ.
ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಶ್ರೀಲಂಕಾದ ವಿದೇಶಾಂಗ ಸಚಿವ ಜಿ ಎಲ್ ಪೀರಿಸ್ ಅವರಿಗೆ ಬರೆದ ಪತ್ರದಲ್ಲಿ ಬೆಂಬಲದ ಭಾಗವಾಗಿ 500 ಮಿಲಿಯನ್ ಯುಎಸ್ ಡಾಲರ್ ಸಾಲವನ್ನು ನೀಡಲು ಒಪ್ಪಿಕೊಂಡಿದ್ದಾರೆ ಎಂದು ಇಲ್ಲಿನ ಭಾರತೀಯ ಹೈಕಮಿಷನ್ ತಿಳಿಸಿದೆ.
ಶ್ರೀಲಂಕಾ ಪ್ರಸ್ತುತ ತೀವ್ರ ವಿದೇಶಿ ವಿನಿಮಯ ಕೊರತೆಯನ್ನು ಎದುರಿಸುತ್ತಿದೆ. ಇದು ಕರೆನ್ಸಿ ಮೌಲ್ಯವನ್ನು ಕಳೆದುಕೊಳ್ಳಲು ಕಾರಣವಾಗಿರುವ ಹಿನ್ನೆಲೆಯಲ್ಲಿ ಆಮದು ದುಬಾರಿಯಾಗಿದೆ. ಇಂಧನ ಸೇರಿದಂತೆ ಬಹುತೇಕ ಎಲ್ಲ ಅಗತ್ಯ ವಸ್ತುಗಳ ಕೊರತೆಯಿಂದ ಶ್ರೀಲಂಕಾ ಸಂಕಷ್ಟದಲ್ಲಿದೆ.
ಬಿಕ್ಕಟ್ಟನ್ನು ನಿವಾರಿಸುವ ಕ್ರಮದ ಭಾಗವಾಗಿ ಅಲ್ಲಿನ ವಿದ್ಯುತ್ ಸಚಿವ ಗಾಮಿನಿ ಲೋಕುಗೆ ಇಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಯೊಂದಿಗೆ ಮಾತುಕತೆ ನಡೆಸಬೇಕಿತ್ತು. ಆದರೆ, ಆ ಮಾತುಕತೆ ನನೆಗುದಿಗೆ ಬಿದ್ದಿದೆ ಎನ್ನಲಾಗಿದೆ.
ವಿದ್ಯುತ್ ಮಂಡಳಿಯು ಪಾವತಿಸದ ದೊಡ್ಡ ಬಿಲ್‌ಗಳನ್ನು ಹೊಂದಿರುವ ಕಾರಣ ರಾಜ್ಯ ಇಂಧನ ಘಟಕವು ತೈಲ ಪೂರೈಕೆಯನ್ನು ನಿಲ್ಲಿಸಿದೆ. ಕಚ್ಚಾ ಆಮದುಗಳಿಗೆ ಡಾಲರ್‌ಗಳಲ್ಲಿ ಪಾವತಿಸಲು ಸಾಧ್ಯವಾಗದ ಕಾರಣ ಏಕೈಕ ಸಂಸ್ಕರಣಾಗಾರವನ್ನು ಇತ್ತೀಚೆಗೆ ಮುಚ್ಚಲಾಗಿತ್ತು.
ಈ ವಾರದ ಆರಂಭದಲ್ಲಿ ಭಾರತ ಸರ್ಕಾರವು ಶ್ರೀಲಂಕಾಗೆ ಇತರ ಪಾವತಿ ಬೆಂಬಲದ ಜೊತೆಗೆ ಶತಕೋಟಿ ಡಾಲರ್ ಸಹಾಯದ ಪ್ಯಾಕೇಜ್ ಘೋಷಿಸಿತ್ತು. ಇದೀಗ ತೈಲ ಖರೀದಿಗೆ 500 ಮಿಲಿಯನ್ ಡಾಲರ್ ಸಾಲ ನೀಡಲು ಮುಂದಾಗಿದೆ.
ಇದನ್ನೂ ಓದಿ: 12 ಸಾವಿರಕ್ಕೂ ಹೆಚ್ಚು ಮಂದಿಗೆ ಲಿಬಿಯಾದಲ್ಲಿ ಅಕ್ರಮ ಬಂಧನ: ವಿಶ್ವಸಂಸ್ಥೆ ಕಳವಳ