ಫೈಸಲಾಬಾದ್ : ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಫೈಸಲಾಬಾದ್ ನಗರದಲ್ಲಿ ಮಧ್ಯ ವಯಸ್ಕ ಮುಸ್ಲಿಂ ವ್ಯಕ್ತಿಯೊಬ್ಬ ಕ್ರಿಶ್ಚಿಯನ್ ಬಾಲಕಿಯನ್ನು ಅಪಹರಿಸಿದ್ದನ್ನು ಪಾಕಿಸ್ತಾನ ಮಾನವ ಹಕ್ಕುಗಳ ಸಮಿತಿ (ಹೆಚ್‌ಆರ್‌ಎಫ್‌ಪಿ) ಖಂಡಿಸಿದೆ.
ಫರಾ ಶಾಹೀನ್ ಎಂಬ 12 ವರ್ಷದ ಬಾಲಕಿಯನ್ನು 45 ವರ್ಷದ ಖಿಝರ್ ಅಹ್ಮದ್ ಅಲಿ ಅಪಹರಿಸಿ, ಆಕೆಯನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳಿಸಿ ಮದುವೆಯಾಗಿದ್ದಾನೆ. ಈ ಘಟನೆ ಜೂನ್ 25 ರಂದು ಫೈಸಲಾಬಾದ್‌ನ ಅಹಮದಾಬಾದ್‌ನಲ್ಲಿ ನಡೆದಿದ್ದು, 2020 ರ ಸೆಪ್ಟೆಂಬರ್ 19 ರಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಪೊಲೀಸರು ಉದ್ದೇಶಪೂರ್ವಕವಾಗಿ ಪ್ರಕರಣದ ದಾಖಲಿಸಲು ವಿಳಂಬ ಮಾಡಿದ್ದಾರೆ ಎಂದು ಹೆಚ್‌ಆರ್‌ಎಫ್‌ಪಿ ಹೇಳಿದೆ.
ಅಪಹರಣಕ್ಕೊಳಗಾದ ಬಾಲಕಿಯ ಸಹೋದರ ಅಫ್ಝಲ್ ಮಾಶಿಹ್ (ವಿಶಾಲ್) ಹೆಚ್‌ಆರ್‌ಎಫ್‌ಪಿಗೆಮಾಹಿತಿ ನೀಡಿರುವಂತೆ ಮತ್ತು ಎಫ್ಐಆರ್ನಲ್ಲಿ ಉಲ್ಲೇಖಿಸಿರುವಂತೆ, ಬಾಲಕಿಯ ಮನೆಯ ಕೆಳ ಮಹಡಿಯಲ್ಲಿ ಟೆಂಟ್ ಸರ್ವಿಸ್ ಬಿಸಿನೆಸ್ ಮಾಡುತ್ತಿದ್ದ ಮುಹಮ್ಮದ್ ಝಾಹಿದ್ ಜೊತೆ ಬಂದ ಖಿಝರ್ ಅಹ್ಮದ್ ಬಾಲಕಿಯನ್ನು ಅಪಹರಿಸಿದ್ದಾನೆ. ಬಾಲಕಿ ಅಳುವ ಶಬ್ದ ಕೇಳಿ ಆಕೆಯ ಸಹೋದರ ಅಫ್ಝಲ್ ಮತ್ತು ಚಿಕ್ಕಪ್ಪ ಕಾಶಿಫ್ ಧಾವಿಸಿ ಬಂದಿದ್ದರು, ಅಷ್ಟರಲ್ಲಿ ಆರೋಪಿಗಳು ಆಕೆಯಯನ್ನು ವಾಹನದಲ್ಲಿ ಕರೆದೊಯ್ದಿದ್ದರು.
ಅಪಹರಣಕ್ಕೊಳಗಾದ ಬಾಲಕಿಯ ಮನೆಗೆ ಮಾನವ ಹಕ್ಕುಗಳ ಸಮಿತಿ ಭೇಟಿ ನೀಡಿ ಮಾಹಿತಿ ಕಲೆ ಹಾಕಿದೆ. ಅರೋಪಿಗಳಿಗೆ ಶಿಕ್ಷೆ ಕೊಡಿಸಿ, ಬಾಲಕಿಯನ್ನು ಮರಳಿ ಕರೆತರುವವರೆಗೆ ಆಕೆಯ ಕುಟುಂಬದೊಂದಿಗೆ ಇರುವುದಾಗಿ ಹೇಳಿದೆ. ಕಾನೂನು ಹೋರಾಟದಲ್ಲೂ ಬೆಂಬಲ ನೀಡುವುದಾಗಿ ತಿಳಿಸಿದೆ. ಬಾಲಕಿಯ ಸಹೋದರ ಅಫ್ಝಲ್ ತನಗೆ ಬೆದರಿಕೆ ಇರುವ ಬಗ್ಗೆ ತಿಳಿಸಿದ್ದಾನೆ.