ನೂರ್ ಸುಲ್ತಾನ್(ಕಜಕಿಸ್ತಾನ): ಕೊರೊನಾಗಿಂತಲೂ ಅಪಾಯಕಾರಿಯಾದ ಕಾಯಿಲೆಯೊಂದು ಕಜಕಿಸ್ತಾನದಲ್ಲಿ ಪತ್ತೆಯಾಗಿದೆ ಎಂದು ಚೀನಾ ಎಚ್ಚರಿಕೆ ನೀಡಿದೆ. ಆದ್ರೆ ಇದನ್ನು ಕಜಕಿಸ್ತಾನ ತಳ್ಳಿಹಾಕಿದೆ.
ಕಜಕಿಸ್ತಾನದಲ್ಲಿ ಅಪರಿಚಿತ ನ್ಯುಮೋನಿಯಾ ಸೋಂಕು ಕಂಡುಬಂದಿದ್ದು, ಜೂನ್ನಲ್ಲೇ 600 ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದೆ. ಇದು ಕೋವಿಡ್ಗಿಂತ ಹೆಚ್ಚು ಅಪಾಯಕಾರಿ ಎಂದು ಚೀನಾ ರಾಯಭಾರ ಕಚೇರಿ ಎಚ್ಚರಿಕೆ ನೀಡಿದ ಬೆನ್ನಲ್ಲೇ, ಈ ಮಾಹಿತಿಯನ್ನು ಕಜಕಿಸ್ತಾನ ಆರೋಗ್ಯ ಸಚಿವಾಲಯ ತಳ್ಳಿ ಹಾಕಿದೆ.
2020ರ ಮೊದಲ ಭಾಗ, ಅಂದರೆ ಕಳೆದ ಆರು ತಿಂಗಳಲ್ಲಿ 1,772 ಜನರು ಈ ಕಾಯಿಲೆಗೆ ಬಲಿಯಾಗಿದ್ದು, ಜೂನ್ ತಿಂಗಳೊಂದರಲ್ಲೇ 628 ಸಾವುಗಳು ವರದಿಯಾಗಿವೆ ಎಂದು ಚೀನಾ ರಾಯಭಾರ ಕಚೇರಿ ಹೇಳಿತ್ತು. ದೇಶದ ಆರೋಗ್ಯ ಇಲಾಖೆಗಳು ನ್ಯುಮೋನಿಯಾ ಸೋಂಕಿನ ಬಗ್ಗೆ ತುಲನಾತ್ಮಕ ಸಂಶೋಧನೆ ನಡೆಸುತ್ತಿವೆ. ಆದರೆ ಇನ್ನೂ ವೈರಸ್ ಅನ್ನು ಗುರುತಿಸಲಾಗಿಲ್ಲ. ಈ ಕಾಯಿಲೆಯಿಂದ ಮೃತಪಡುವವರ ಪ್ರಮಾಣ ಕೊರೊನಾಗೆ ಬಲಿಯಾದವರ ಸಂಖ್ಯೆಗಿಂತಲೂ ಅಧಿಕವಾಗಲಿದೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.
ಪ್ರತಿನಿತ್ಯ ನ್ಯುಮೋನಿಯಾದಿಂದ ಬಳಲುತ್ತಿರುವ ಸುಮಾರು 300 ರೋಗಿಗಳು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ ಎಂದು ಕಜಕಿಸ್ತಾನದ ಆರೋಗ್ಯ ರಕ್ಷಣಾ ವಿಭಾಗದ ಮುಖ್ಯಸ್ಥ ಸೌಲ್ ಕಿಸಿಕೋವಾ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.