ಕರಾಚಿ: ಪಾಕಿಸ್ತಾನದ ಅಲ್ಪಸಂಖ್ಯಾತ ಶಿಯಾ ಹಜಾರಾ ಸಮುದಾಯದ ಕನಿಷ್ಠ 11 ಕಲ್ಲಿದ್ದಲು ಗಣಿ ಕೆಲಸಗಾರರನ್ನು ಬಂದೂಕುಧಾರಿಗಳು ಅಪಹರಿಸಿ ಹತ್ತಿರದ ಪರ್ವತಗಳಿಗೆ ಕರೆದೊಯ್ದ ಹತ್ಯೆ ಮಾಡಿದ್ದಾರೆ.
ನೈರುತ್ಯ ಪ್ರಾಂತ್ಯದ ಬಲೂಚಿಸ್ತಾನದಲ್ಲಿ ಭಾನುವಾರ ಗುಂಡು ಹಾರಿಸಿ ಕೊಂದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಗಣಿಗಾರರು ಮಚ್ನ ಕಲ್ಲಿದ್ದಲು ಮೈದಾನದಲ್ಲಿ ಕೆಲಸ ಮಾಡಲು ಹೋಗುತ್ತಿದ್ದಾಗ ಅಪರಿಚಿತ ಬಂದೂಕುಧಾರಿಗಳು ಅವರನ್ನು ಅಪಹರಿಸಿ ಹತ್ತಿರದ ಬೆಟ್ಟಗಳಿಗೆ ಕರೆದೊಯ್ದ ನಂತರ ಅವರ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಅಲ್ಲಿನ ಪೊಲೀಸರು ಮಾಹಿತಿ ನೀಡಿದ್ದಾರೆ.
ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ತೀವ್ರವಾಗಿ ಗಾಯಗೊಂಡ ಐವರು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಮೃತಪಟ್ಟಿದ್ದಾರೆ. ಘಟನೆ ನಂತರ ಪೊಲೀಸರು, ಫ್ರಾಂಟಿಯರ್ ಕಾರ್ಪ್ಸ್ ಮತ್ತು ಜಿಲ್ಲಾಡಳಿತ ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಘಟನೆಯನ್ನು ಪ್ರಧಾನಿ ಇಮ್ರಾನ್ ಖಾನ್ ಖಂಡಿಸಿದ್ದು, ಇದು ಮತ್ತೊಂದು ಹೇಡಿತನದ ಅಮಾನವೀಯ ಭಯೋತ್ಪಾದಕ ಕೃತ್ಯ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸಂತ್ರಸ್ತ ಕುಟುಂಬಗಳನ್ನು ಸರ್ಕಾರ ಕೈಬಿಡುವುದಿಲ್ಲ. ಹಾಗೆಯೇ ಕೊಲೆಗಾರರನ್ನು ಬಂಧಿಸಲು ಮತ್ತು ನ್ಯಾಯಲಯದ ಮುಂದೆ ನಿಲ್ಲಿಸಲು ಎಲ್ಲಾ ಸಂಪನ್ಮೂಲ ಬಳಕೆ ಮಾಡಿಕೊಳ್ಳಬಹುದು ಎಂದು ತನಿಖಾ ಸಂಸ್ಥೆಗೆ ಸೂಚಿಸಿದ್ದಾರೆ.
ಬಲೂಚಿಸ್ತಾನ್ ಮುಖ್ಯಮಂತ್ರಿ ಜಾಮ್ ಕಮಲ್ ಖಾನ್ ಘಟನೆಯನ್ನು ಖಂಡಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳಿಂದ ತನಿಖಾ ವರದಿ ಕೋರಿದ್ದಾರೆ. ಮುಗ್ಧ ಕಲ್ಲಿದ್ದಲು ಗಣಿ ಕಾರ್ಮಿಕರನ್ನು ಗುರಿಯಾಗಿಸಿಕೊಂಡವರ ಮೇಲೆ ಯಾವುದೇ ರೀತಿ ಕರುಣೆ ತೋರಿಸಲು ಅರ್ಹರಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಈ ಹತ್ಯೆಯ ಹೊಣೆಯನ್ನು ಯಾವುದೇ ಗುಂಪು ಹೊತ್ತುಕೊಂಡಿಲ್ಲ. ಆದರೆ, ನಿಷೇಧಿತ ಸುನ್ನಿ ಉಗ್ರಗಾಮಿ ಸಂಘಟನೆಯಾದ ಲಷ್ಕರ್-ಎ-ಜಾಂಗ್ವಿ ಈ ಹಿಂದೆ ಬಲೂಚಿಸ್ತಾನದ ಅಲ್ಪಸಂಖ್ಯಾತ ಹಜಾರಾ ಸಮುದಾಯವನ್ನು ಗುರಿಯಾಗಿಸಿಕೊಂಡಿದೆ ಎಂದು ತಿಳಿದುಬಂದಿದೆ.