ಬುಸಾನ್ (ದಕ್ಷಿಣ ಕೊರಿಯಾ): ವಸತಿ ಕಟ್ಟಡದಲ್ಲಿ ಅಗ್ನಿ ದುರಂತ ಸಂಭವಿಸಿದ್ದರಿಂದಾಗಿ ಓರ್ವ ಮೃತಪಟ್ಟು, 23 ಮಂದಿ ಗಾಯಗೊಂಡಿರುವ ಘಟನೆ ದಕ್ಷಿಣ ಕೊರಿಯಾ ರಾಷ್ಟ್ರದ ಬುಸಾನ್ ನಗರದಲ್ಲಿ ನಡೆದಿದೆ.
ಸಿಯೋಲ್ನಿಂದ ಸುಮಾರು 450 ಕಿ.ಮೀ ದೂರದ ಬುಸಾನ್‌ನಗರದ ಗೀಮ್ಜಿಯಾಂಗ್ನಲ್ಲಿ 24 ಅಂತಸ್ತಿನ ಬಹುಮಹಡಿ ಕಟ್ಟಡದ 12ನೇ ಅಂತಸ್ತಿನಲ್ಲಿ ಅಗ್ನಿ ಅನಾಹುತ ಸಂಭವಿಸಿದೆ ಎಂದು ಯೊನ್ಫೆಪ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
12ನೇ ಅಂತಸ್ತಿನ ಮನೆಯೊಂದರಲ್ಲಿ ಅಗ್ನಿ ಅನಾಹುತ ಸಂಭವಿಸಿದ್ದು, 13ನೇ ಅಂತಸ್ತಿನಲ್ಲಿ ವಾಸವಿದ್ದವರು ಅಗ್ನಿ ಶಾಮಕ ಸಿಬ್ಬಂದಿಗೆ ವಿಷಯ ಮುಟ್ಟಿಸಿದ್ದಾರೆ. ಅಗ್ನಿ ಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಕಟ್ಟಡದಲ್ಲಿದ್ದ ಜನರನ್ನು ರಕ್ಷಿಸಿದ್ದಾರೆ.
ಇದೇ ವೇಳೆ ಓರ್ವ ಸಾವನ್ನಪ್ಪಿದ್ದು, ಸುಮಾರು 23 ಮಂದಿ ಗಾಯಗೊಂಡಿದ್ದಾರೆ. ಬೆಂಕಿ ನಂದಿಸಲು ಸುಮಾರು 40 ನಿಮಿಷ ತೆಗೆದುಕೊಂಡಿದ್ದು, ಬೇರೆ ಕೊಠಡಿಗಳಿಗೆ ಬೆಂಕಿ ಹಬ್ಬಲಿಲ್ಲ ಎಂದು ಅಗ್ನಿ ಶಾಮಕ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
1995ರಲ್ಲಿ ಕಟ್ಟಡವನ್ನು ನಿರ್ಮಿಸಲಾಗಿದ್ದು, ಯಾವುದೇ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿರಲಿಲ್ಲ ಎಂದು ತಿಳಿದು ಬಂದಿದೆ. ಸದ್ಯಕ್ಕೆ ಮೃತದೇಹವನ್ನು ನ್ಯಾಷನಲ್ ಫೋರೆನ್ಸಿಕ್ ಸರ್ವೀಸ್ಗೆ ರವಾನಿಸಲು ಪೊಲೀಸರು ಮುಂದಾಗಿದ್ದಾರೆ.