ನ್ಯೂಯಾರ್ಕ್ : ಪ್ಲಾಸ್ಟಿಕ್ನಿಂದ ಮಾಡಲ್ಪಟ್ಟ ವಸ್ತುಗಳ ಬಳಕೆಯಿಂದ ಸುಮಾರು 1 ಲಕ್ಷ ಜನರು ಸಾಯುತ್ತಿದ್ದಾರೆ ಎಂದು ನ್ಯೂಯಾರ್ಕ್ ವಿಶ್ವವಿದ್ಯಾಲಯದ ಅಧ್ಯಯನದ ವರದಿಯೊಂದು ಬಹಿರಂಗಪಡಿಸಿದೆ.
ನ್ಯೂಯಾರ್ಕ್ ವಿಶ್ವವಿದ್ಯಾಲಯದ ಗ್ರಾಸ್ಮನ್ ಸ್ಕೂಲ್ ಆಫ್ ಮೆಡಿಸಿನ್ ಸುಮಾರು 55 ರಿಂದ 64 ವಯೋಮಾನದ 5,000 ವಯಸ್ಕರನ್ನು ಈ ಅಧ್ಯಯನಕ್ಕೆ ತೆಗೆದುಕೊಂಡಿತ್ತು. ಇದೀಗ ಸಂಶೋಧನೆಯಿಂದ ಆಘಾತಕಾರಿ ವಿಷಯವೊಂದು ಹೊರಬಿದ್ದಿದೆ. ಮೂತ್ರದಲ್ಲಿ ಥಾಲೇಟ್ಸ್ ಅಧಿಕ ಸಾಂದ್ರತೆ ಹೊಂದಿರುವವರು ಹೃದಯ ಸಂಬಂಧಿ ಕಾಯಿಲೆಯಿಂದ ಸಾಯುವ ಸಾಧ್ಯತೆ ಹೆಚ್ಚು ಎಂದು ತಿಳಿದು ಬಂದಿದೆ.
ದೈನಂದಿನ ದಿನಚರಿಯಲ್ಲಿ ಪ್ಲಾಸ್ಟಿಕ್ ಬಳಕೆ ವಿಪರೀತವಾಗುತ್ತಿದೆ. ಸ್ನಾನ ಮಾಡಲು ಬಳಸುವ ಶಾಂಪೂ ಹಾಗೂ ಮುಖದ ಸೌಂದರ್ಯ ಹೆಚ್ಚಿಸಲು ಮೇಕಪ್ಗಳಿಗೆ ಬಳಸುವ ರಾಸಾಯನಿಕ ಥಾಲೇಟ್ಸ್ಗಳು ಮಾನವರ ದೇಹದ ಮೇಲೆ ಪರಿಣಾಮ ಬೀರುತ್ತಿವೆ. ಹಾರ್ಮೋನಿಗೆ ತೊಂದರೆ ನೀಡುತ್ತಿವೆ.
ಅಷ್ಟೇ ಅಲ್ಲ, ಇದು ವ್ಯಕ್ತಿಯ ಜೀವದ ಮೇಲೆ ಸಹ ಪರಿಣಾಮ ಬೀರುತ್ತಿದೆ ಎನ್ನಲಾಗಿದೆ. ಈ ವಸ್ತುಗಳ ಮೇಲೆ ಪ್ರತಿದಿನ ಗೊತ್ತಿಲ್ಲದೆ ನಾವು ಒಗ್ಗಿಕೊಳ್ಳುತ್ತಾ ಬಂದಿದ್ದೇವೆ. ಇದರಿಂದಾಗಿ ವಾರ್ಷಿಕವಾಗಿ ಅಮೆರಿಕದಲ್ಲಿ ಸುಮಾರು 1 ಲಕ್ಷ ಜನರು ಸಾಯುತ್ತಿದ್ದಾರೆ ಎಂದು ಸಂಶೋಧನೆ ತಿಳಿಸಿದೆ.
ಅಧ್ಯಯನದ ಪ್ರಮುಖ ಲೇಖಕ ಲಿಯೊನಾರ್ಡೊ ಟ್ರಾಸಾಂಡೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. "ನಮ್ಮ ಸಂಶೋಧನೆ ಮೂಲಕ ಥಾಲೇಟ್ಸ್ ಮಾನವನ ಸಾವಿಗೆ ಕಾರಣವಾಗುತ್ತಿದೆ ಎಂದು ತಿಳಿದು ಬಂದಿದೆ.
ವಿಶೇಷವಾಗಿ ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗಿ ಜನರು ಸಾವನ್ನಪ್ಪುತ್ತಿದ್ದಾರೆ. ನಮ್ಮ ಸಂಶೋಧನೆಯಿಂದ ಸಮಾಜದ ಮೇಲೆ ಈ ರಾಸಾಯನಿಕದ ಪ್ರಮಾಣವು ನಾವು ಮೊದಲು ಯೋಚಿಸಿದ್ದಕ್ಕಿಂತ ಹೆಚ್ಚಾಗಿದೆ ಎಂದು ಸೂಚಿಸುತ್ತದೆ ಎಂದಿದ್ದಾರೆ.