ವಾಷಿಂಗ್ಟನ್(ಅಮೆರಿಕಾ): ವಿಶ್ವವ್ಯಾಪಿಯಾಗಿ ಮಹಾಮಾರಿ ಕೊರೊನಾ ಸೋಂಕು ಹರಡುತ್ತಿರುವ ಹಿನ್ನಲೆಯಲ್ಲಿ ವಾಷಿಂಗ್ಟನ್ನಲ್ಲೂ ಮುಂಜಾಗ್ರತಾ ಕ್ರಮ ಕೈಗೊಂಡು, ಅಂತಾರಾಷ್ಟ್ರೀಯ ಪ್ರಯಾಣವನ್ನು ಸ್ಥಗಿತಗೊಳಿಸಲಾಗಿದೆ. ಆದರೆ ಇಷ್ಟೆಲ್ಲಾ ನಡೆಯುತ್ತಿದ್ದರೂ ಅಲ್ಲಿನ ಕೆಲ ಅಧಿಕಾರಿಗಳು, ಸೆನೆಟರ್ಗಳು ಮುಂಜಾಗ್ರತಾ ಕ್ರಮಗಳನ್ನು ಗಾಳಿಗೆ ತೂರಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
ಹೌದು, ಇಲ್ಲಿನ ಸೆಕ್ರೆಟರಿ ಮೈಕ್ ಪಾಂಪೆ ಅಫ್ಘಾನಿಸ್ಥಾನಕ್ಕೆ ಪ್ರಯಾಣ ಬೆಳೆಸಿರುವುದು ಮುಂಜಾಗ್ರತಾ ಕ್ರಮಗಳನ್ನು ಕಡೆಗಣಿಸಿದಂತಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಅಲ್ಲಿನ ಇಲಾಖೆಯ ಅಧಿಕಾರಿಗಳು, ಅಫ್ಘಾನಿಸ್ಥಾನದಲ್ಲಿ ರಾಜಕೀಯ ಪ್ರಕ್ಷುಬ್ಧತೆಯ ಕಾರಣದಿಂದಾಗಿ ಜಾಗತಿಕ ಪ್ರಯಾಣದ ಸ್ಥಗಿತದ ಮಧ್ಯೆ ಪ್ರವಾಸವು ಅಗತ್ಯವಾಗಿತ್ತು ಎಂದು ಹೇಳಿದ್ದಾರೆ. ಆದರೆ ಕೆಲ ತಜ್ಞರು ಇವರ ಈ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊರೊನಾ ವೈರಸ್ ಹರಡುವ ಹಿನ್ನೆಲೆಯಲ್ಲಿ ಜಿಮ್ಗಳನ್ನು ಸಹ ಬಂದ್ ಮಾಡಲಾಗಿದೆ. ಆದರೆ ಇಲ್ಲಿನ ಸೆನೆಟರ್ ರಾನ್ಡ್ ಪೌಲ್ ಎಂಬಾತ ಜಿಮ್ನಲ್ಲಿ ವರ್ಕೌಟ್ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಇನ್ನು ಆತನಿಗೆ ಕೊರೊನಾ ಪರೀಕ್ಷೆ ಮಾಡಿಸಿದ್ದು, ವರದಿಯು ಪಾಸಿಟಿವ್ ಬಂದಿದೆ. ಈ ಸಂದರ್ಭದಲ್ಲಿ ಪೌಲ್ಗೆ ಕ್ವಾರಂಟೈನ್ನಲ್ಲಿರುವಂತೆ ಸೂಚಿಸಿದ ವೈದ್ಯರ ವಿರುದ್ಧ ಆತ ಗುಡುಗಿದ್ದಾನೆ ಎನ್ನಲಾಗ್ತಿದೆ.
ಇವಿಷ್ಟೇ ಅಲ್ಲದೆ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಕೈ ಕುಲುಕದಂತೆ ಎಚ್ಚರಿಕೆ ನೀಡಿದ್ದರೂ ಅವರು ಅದನ್ನು ಉಲ್ಲಂಘಿಸಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಈಗಾಗಲೇ ಎಲ್ಲೆಡೆ ವರದಿಯಾಗುತ್ತಿದ್ದರೂ ಟ್ರಂಪ್ ಹಾಗೂ ಇತರ ಸೆನೆಟರ್ಗಳು ವೈಟ್ಹೌಸ್ನಲ್ಲಿ ಸೇರಿದ್ದರು. ಇಂಗ್ಲಿಷ್ ಮ್ಯಾಗಜೀನ್ಗೆ ನೀಡಿರುವ ಸಂದರ್ಶನವೊಂದರಲ್ಲಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಲರ್ಜಿ ಆ್ಯಂಡ್ ಇನ್ಫೆಕ್ಷನ್ ಡಿಸೀಸ್ ಸಂಸ್ಥೆಯ ನಿರ್ದೇಶಕ ಆಂಥೊನಿ ಫಾಸಿ ಭಾಗವಹಿಸಿ ಟ್ರಂಪ್ ಕೈಕುಲಿಕಿದ ಬಗ್ಗೆ ಮಾತನಾಡಿದ್ದಾರೆ. ಯಾರೇ ಆಗಲಿ, ಈ ಸಂದರ್ಭದಲ್ಲಿ ಕೈಕುಲುಕಬಾರದು. ಇಂತಹ ಕ್ಲಿಷ್ಟಕರ ವೇಳೆಯಲ್ಲಿ ದೈಹಿಕವಾಗಿ ದೂರವಿರಬೇಕು ಎಂದು ಸಲಹೆ ನೀಡಿದ್ದಾರೆ.
ಜಗತ್ತಿನಲ್ಲಿ ಕೊರೊನಾ ಮಹಾಮಾರಿಯಿಂದ ಅವಾಂತರಗಳು ಸೃಷ್ಟಿಯಾಗುತ್ತಿದ್ದರೂ ಸಹ ಜಗತ್ತಿನ ದೊಡ್ಡಣ್ಣ ಎಂದು ಕರೆಯಲ್ಪಡುವ ಅಮೆರಿಕಾದ ಅಧ್ಯಕ್ಷ, ಸೆನೆಟರ್ಗಳೇ ನಿಯಮ ಉಲ್ಲಂಘಿಸಿದ್ದಾರೆ. ಆರೋಗ್ಯ ತಜ್ಞರ ಮಾರ್ಗದರ್ಶನ ಮತ್ತು ರಾಜ್ಯ ನಾಯಕರು ನಿರ್ದೇಶನಗಳನ್ನ ನೀಡಿದ್ದರೂ ಸಹ ಅವುಗಳನ್ನು ಉಲ್ಲಂಘಿಸುತ್ತಿರುವುದು ವಿಪರ್ಯಾಸವೇ ಸರಿ. ವಾಷಿಂಗ್ಟನ್‌ನ ಕೆಲವು ಪ್ರಬಲ ವ್ಯಕ್ತಿಗಳು ಸೋಂಕು ಹರಡುವಿಕೆ ತಡೆಯುವ ಕ್ರಮಗಳನ್ನು ನಿರಾಕರಿಸಿದ್ದಾರೆ ಎನ್ನುವುದು ಇನ್ನೂ ಆತಂಕಕಾರಿ ಬೆಳವಣಿಗೆಯಾಗಿದೆ.