2019 ರಲ್ಲಿ ಮಿಸ್ ಯುಎಸ್ಎ ಆಗಿ ಹೊರಹೊಮ್ಮಿದ್ದ ಚೆಸ್ಲಿ ಕ್ರಿಸ್ಟ್ (30) ಅವರು 60 ಅಂತಸ್ತಿನ ಕಟ್ಟಡದಿಂದ ಬಿದ್ದು ಮೃತಪಟ್ಟಿರುವುದು ವರದಿಯಾಗಿದೆ. ಅವರ ನಿಧನಕ್ಕೆ 2021ರ ಮಿಸ್ ಯೂನಿವರ್ಸ್ ಆಗಿರುವ ಭಾರತದ ಹರ್ನಾಜ್ ಸಂಧು ಕಂಬನಿ ಮಿಡಿದಿದ್ದಾರೆ.
1991ರಲ್ಲಿ ಜನಿಸಿದ್ದ ಚೆಸ್ಲಿ ಕ್ರಿಸ್ಟ್ ಫ್ಯಾಷನ್ ಲೋಕದಲ್ಲಿ ಮಾತ್ರವಲ್ಲದೇ ವೇಕ್ ಫಾರೆಸ್ಟ್ ಯೂನಿವರ್ಸಿಟಿ ಸ್ಕೂಲ್ ಆಫ್ ಲಾದಿಂದ ಕಾನೂನು ಪದವಿ ಪಡೆದು ವಕೀಲೆಯಾಗಿಗೂ, ಎಕ್ಸ್‌ಟ್ರಾ ಟಿವಿ (Extra TV) ವರದಿಗಾರ್ತಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. 'ವೈಟ್ ಕಾಲರ್ ಗ್ಲಾಮ್' ಎಂಬ ಫ್ಯಾಷನ್ ಬ್ಲಾಗ್ ಸ್ಥಾಪಿಸಿದ್ದರು. ಆದರೆ ನಿನ್ನೆ ನ್ಯೂಯಾರ್ಕ್ ನಗರದ 60 ಅಂತಸ್ತಿನ ಕಟ್ಟಡದಿಂದ ಬಿದ್ದು ಪ್ರಾಣ ಬಿಟ್ಟಿದ್ದಾರೆ. ಇವರ ಹಠಾತ್ ನಿಧನ ಎಲ್ಲರಿಗೂ ಆಘಾತ ತಂದಿದೆ.
ಕ್ರಿಸ್ಟ್ ಸಾವಿಗೆ ಸಂತಾಪ ಸೂಚಿಸಿರುವ ಹರ್ನಾಜ್ ಸಂಧು, ಭುವನ ಸುಂದರಿ ಕಿರೀಟ ಮುಡಿಗೇರಿಸಿಕೊಂಡ ಬಳಿಕ ಕ್ರಿಸ್ಟ್ ಜೊತೆಗೆ ತೆಗೆದೊಕೊಂಡಿದ್ದ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. "ಇದು ಹೃದಯವಿದ್ರಾವಕ ಮತ್ತು ನಂಬಲಾಗದ ಸಂಗತಿಯಾಗಿದೆ, ನೀವು ಯಾವಾಗಲೂ ಅನೇಕರಿಗೆ ಸ್ಫೂರ್ತಿಯಾಗಿದ್ದೀರಿ. ರೆಸ್ಟ್ ಇನ್ ಪೀಸ್ ಚೆಸ್ಲಿ" ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ 15ರ ವಿಜೇತರಾಗಿ ಹೊರಹೊಮ್ಮಿದ ತೇಜಸ್ವಿ ಪ್ರಕಾಶ್!
ಅದೇ ಕಟ್ಟಡದಲ್ಲಿ ಒಂಬತ್ತನೇ ಮಹಡಿಯಲ್ಲಿ ವಾಸಿಸುತ್ತಿದ್ದ ಕ್ರಿಸ್ಟ್ ಅವರ ಸಾವು ಆತ್ಮಹತ್ಯೆ ಎಂದು ಮೇಲ್ನೋಟಕ್ಕೆ ಕಾಣುತ್ತಿದ್ದು, ಮರಣೋತ್ತರ ಪರೀಕ್ಷೆಯ ವರದಿಯ ಬಳಿಕ ನಿಖರ ಕಾರಣ ಗೊತ್ತಾಗಲಿದೆ.
ಇಲ್ಲೊಮ್ಮೆ ನೋಡಿ - ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ