ಮೇರಿಲ್ಯಾಂಡ್ : ಜನರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಏನೆಲ್ಲ ಮಾಡ್ತಾರೆ. ಈ ಸಂದರ್ಭದಲ್ಲಿ ಕೆಲ ಅವಘಡಗಳು ಸಹ ಸಂಭವಿಸುತ್ತವೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ.
ಅಮೆರಿಕದ ಮೇರಿಲ್ಯಾಂಡ್ ರಾಜ್ಯದಲ್ಲಿ ವ್ಯಕ್ತಿಯೊಬ್ಬರಿಗೆ 10,000 ಚದರ ಅಡಿಗಳಷ್ಟು ಮನೆಯಿದೆ. ಮನೆಯನ್ನ ಬಾಡಿಗೆಗೆ ಕೊಟ್ಟಿದ್ದಾರೆ. ಆದ್ರೆ, ಈ ವಿಶಾಲವಾದ ಮನೆಯಲ್ಲಿ ಹಾವುಗಳ ಹಾವಳಿ ಹೆಚ್ಚಾಗಿದೆ. ಇದರಿಂದ ಬೇಸತ್ತ ಮನೆ ಮಾಲೀಕ ಹಾವುಗಳನ್ನು ಓಡಿಸಲು ಮುಂದಾಗಿದ್ದಾನೆ.
ಮನೆಯಲ್ಲಿ ಹೊಗೆ ಹಾಕಿ ಹಾವುಗಳನ್ನು ಓಡಿಸಲು ಮನೆ ಮಾಲೀಕ ತೀರ್ಮಾನಿಸಿದ್ದ. ಅದರಂತೆ ಹಾವುಗಳನ್ನು ಹೊರ ಹಾಕಲು ಸಾಕಷ್ಟು ಹೊಗೆ ಹಾಕುವುದಕ್ಕೆ ಕಲ್ಲಿದ್ದಲನ್ನು ಹಚ್ಚಿದ್ದಾನೆ. ಅಷ್ಟೇ ಅಲ್ಲ, ಆ ಕಲ್ಲಿದ್ದಲನ್ನು ಸುಡುವ ಸಾಮಾಗ್ರಿಗಳ ಬಳಿ ಇಟ್ಟಿದ್ದಾರೆ.
ಇದರಿಂದಾಗಿ ಮನೆ ನೋಡು-ನೋಡುತ್ತಿದ್ದಂತೆ ಬೆಂಕಿಯಿಂದ ಆವರಿಸಿಕೊಂಡಿದೆ. ಕೆಲವೇ ಗಂಟೆಗಳಲ್ಲಿ ಮನೆ ಸಂಪೂರ್ಣ ಸುಟ್ಟು ಕರಕಲಾಗಿದೆ. ಸುದ್ದಿ ತಿಳಿದ ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯ ಕೈಗೊಂಡಿದೆ.
ಬೆಂಕಿ ನಂದಿಸಲು ಹರಸಹಾಸವನ್ನೇ ಪಟ್ಟರು. ಈ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಗಳು ಸಂಭವಿಸಿಲ್ಲ. ಈ ಬೆಂಕಿಯಿಂದ ಹಾವುಗಳು ಸಹ ಸುಟ್ಟು ಹೋಗಿರುವ ಅನುಮಾನ ಕಾಡುತ್ತಿದೆ. ಈ ಬೆಂಕಿ ಅವಘಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇನ್ನು ಈ ಘಟನೆಯಿಂದಾಗಿ ಮನೆ ಮಾಲೀಕರಿಗೆ ಸಂಕಟ ತಂದಿದೆ. ಮನೆ ಮಾಲೀಕರು ಈ ಐಡಿಯಾ ಬಿಟ್ಟು ಬೇರೆ ಏನಾದ್ರೂ ಯೋಚಿಸಬೇಕಾಗಿತ್ತು ಎಂದು ಕೆಲವರು ಟೀಕೆಗಳನ್ನ ಮಾಡಿದ್ದಾರೆ.
ಮನೆ ಮಾಲೀಕ ಈ ಮನೆಯನ್ನು ಇತ್ತೀಚೆಗೆ 13.55 ಕೋಟಿ ಹಣ ಕೊಟ್ಟು ಖರೀದಿಸಿದ್ದರು. ಈ ಬೆಂಕಿಯ ಅವಘಡದಿಂದಾಗಿ ಮಾಲೀಕನಿಗೆ ಬರೋಬ್ಬರಿ ₹7.52 ಕೋಟಿ ನಷ್ಟವಾಗಿದೆ ಎಂದು ಸ್ಥಳೀಯ ಸುದ್ದಿ ವಾಹಿನಿಯೊಂದು ವರದಿ ಮಾಡಿದೆ.