ವಾಷಿಂಗ್ಟನ್: ಎಲ್ಲ ಹೊಸ ಅತಿಥಿ ಕೆಲಸಗಾರರ ವೀಸಾಗಳನ್ನು 60 ದಿನಗಳವರೆಗೆ ಮತ್ತು ಎಚ್ -1 ಬಿ ಸೇರಿದಂತೆ ಕೆಲವು ಹೊಸ ಅತಿಥಿ ಕೆಲಸಗಾರರ ವೀಸಾಗಳನ್ನೂ ಕೂಡ ಕನಿಷ್ಠ ಒಂದು ವರ್ಷದವರೆಗೆ ತಡೆಹಿಡಿಯುವಂತೆ ಅಮೆರಿಕ ಅಧ್ಯಕ್ಷರಿಗೆ ಅಲ್ಲಿನ ಸೆನೆಟರ್‌ಗಳು ಮನವಿ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ ನಿರುದ್ಯೋಗ ಸಮಸ್ಯೆ ಸಾಮಾನ್ಯ ಮಟ್ಟಕ್ಕೆ ಬರುವವರೆಗೂ ಅತಿಥಿಗಳ ವೀಸಾ ಅಮಾನತು ಮಾಡುವಂತೆ ರಿಪಬ್ಲಿಕನ್ ಸೆನೆಟರ್‌ಗಳು ಕೋರಿಕೆ ಇಟ್ಟಿದ್ದಾರೆ.
ಕೊರೊನಾ ಸೋಂಕು ದೇಶ ಹಾಗೂ ವಿಶ್ವದ ಮಾರುಕಟ್ಟೆಯನ್ನು ನಾಶಪಡಿಸಿದೆ. ಹಾಗೆಯೇ ಅಮೆರಿಕದಲ್ಲಿ 5 ಜನರಲ್ಲಿ ಒಬ್ಬ ನಿರುದ್ಯೋಗಕ್ಕೆ ಒಳಗಾಗಿದ್ದು, ಸರ್ಕಾರದ ಸವಲತ್ತಿಗೆ ಮನವಿ ಮಾಡುತ್ತಿದ್ದಾನೆ. ಲಾಕ್ಡೌನ್ ಕ್ರಮ ವಿಶ್ವದ ಆರ್ಥಿಕತೆ ಮೇಲೆ ಭಾರಿ ಹೊಡೆತ ಬಿದ್ದಿದೆ ಎಂದು ಸೆನೆಟರ್‌ಗಳು ಅಧ್ಯಕ್ಷರಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದೆಲ್ಲವುಗಳ ಮಧ್ಯ 3.2 ಮಿಲಿಯನ್ ಅಮೆರಿಕನ್ನರು ಕೆಲಸ ಕಳೆದುಕೊಂಡಿದ್ದು, ನಿರುದ್ಯೋಗದ ಹಕ್ಕಿಗಾಗಿ ಮನವಿ ಸಲ್ಲಿಸಿದ್ದಾರೆ ಎಂದು ಕಾರ್ಮಿಕ ಇಲಾಖೆಯೂ ಮಾಹಿತಿ ನೀಡಿದೆ.
ಮೇ 7 ರಂದು ಅಧ್ಯಕ್ಷ ಟ್ರಂಪ್‌ಗೆ ಬರೆದ ಪತ್ರಕ್ಕೆ ಸೆನೆಟರ್‌ಗಳಾದ ಟೆಡ್ ಕ್ರೂಜ್, ಟಾಮ್ ಕಾಟನ್, ಚಕ್ ಗ್ರಾಸ್ಲೆ ಮತ್ತು ಜೋಶ್ ಹಾಲೆ ಸಹಿ ಹಾಕಿದ್ದಾರೆ. ಮಾರ್ಚ್ ಮಧ್ಯದಿಂದ 33 ದಶಲಕ್ಷಕ್ಕೂ ಹೆಚ್ಚು ಅಮೆರಿಕನ್ನರು ನಿರುದ್ಯೋಗ ಭತ್ಯೆಯ ವ್ಯಾಪ್ತಿಗೆ ಅರ್ಜಿ ಸಲ್ಲಿಸಿದ್ದಾರೆ ಮತ್ತು ಅಮೆರಿಕದ ಉದ್ಯೋಗಿಗಳ ಸರಿಸುಮಾರು ಐದನೇ ಒಂದು ಭಾಗವು ಕೆಲಸವಿಲ್ಲದೇ ಸುಮ್ಮನಿದೆ ಎಂದು ಸೆನೆಟರ್‌ಗಳು ಹೇಳಿದ್ದಾರೆ.
ಮುಂದಿನ 60 ದಿನಗಳವರೆಗೆ ಎಲ್ಲ ಅತಿಥಿ ಕೆಲಸಗಾರರ ವೀಸಾಗಳನ್ನು ಅಮಾನತುಗೊಳಿಸುವಂತೆ ಪತ್ರದಲ್ಲಿ ನಿರ್ದಿಷ್ಟವಾಗಿ ಉಲ್ಲೇಖ ಮಾಡಲಾಗಿದೆ. ಅಲ್ಲದೇ, ಕೆಲವು ವರ್ಗದ ಅತಿಥಿ ಕೆಲಸಗಾರರ ವೀಸಾಗಳನ್ನು ಒಂದು ವರ್ಷ ಅಥವಾ ನಿರುದ್ಯೋಗ ಸಮಸ್ಯೆ ಸಾಮಾನ್ಯ ಹಂತಕ್ಕೆ ಬರುವ ವರೆಗೆ ಅಮಾನತಿನಲ್ಲಿ ಇಡಬೇಕು ಎಂದು ತಿಳಿಸಿದ್ದಾರೆ. ಆರ್ಥಿಕ ಚೇತರಿಕೆಯ ಆರಂಭಿಕ ಹಂತಗಳಲ್ಲಿ ನಿರುದ್ಯೋಗಿ ಅಮೆರಿಕನ್ನರನ್ನು ರಕ್ಷಿಸಲು ಈ ಕ್ರಮ ಜರುಗಿಸಬೇಕು ಎಂದು ಸೂಚಿಸಲಾಗಿದೆ.
ಈ ಅಮಾನತಿನ ವಿಷಯದಲ್ಲಿ ಕೃಷಿ, ಸೂಕ್ಷ್ಮ ಕೈಗಾರಿಕೆಗಳಿಗೆ ವಿನಾಯಿತಿ ನೀಡಬೇಕು ಎಂದು ಹೇಳಿರುವ ಸೆನೆಟರ್‌ಗಳು, ಎಚ್ -2 ಬಿ ವೀಸಾಗಳು (ಕೃಷಿಯೇತರ ಕೆಲಸಗಾರರು), ಎಚ್ -1 ಬಿ ವೀಸಾ (ವಿಶೇಷ ಉದ್ಯೋಗ ಕಾರ್ಮಿಕರು) ಮತ್ತು ಇಬಿ -5 ವಲಸೆಗಾರರ ವೀಸಾವನ್ನು ತಕ್ಷಣವೇ ಅಮಾನತುಗೊಳಿಸುವಂತೆ ನಾವು ನಿಮ್ಮನ್ನು ಒತ್ತಾಯಿಸುತ್ತೇವೆ ಎಂದು ಮನವಿ ಮಾಡಿದ್ದಾರೆ. ಕೊರೊನಾ ವಿರುದ್ಧ ಹೋರಾಡುತ್ತಿರುವ ವಾರಿಯರ್ಸ್ಗಳು ಇಲ್ಲಿಗೆ ಬರಲು ಎಚ್ -1 ಬಿ ಯಲ್ಲಿ ವಿನಾಯಿತಿ ಕೂಡ ನೀಡಬಹುದು ಎಂದು ಸೂಚಿಸಿದ್ದಾರೆ.
ಇತ್ತೀಚೆಗಷ್ಟೇ ಅಧ್ಯಕ್ಷ ಟ್ರಂಪ್ ಅಮೆರಿಕದ ಹಿಂದಿನ ಅಧ್ಯಕ್ಷ ಬರಾಕ್ ಒಬಾಮ ಕಾಲದಲ್ಲಿ ತಂದಿದ್ದ ಕಾಯ್ದೆ ಮುಂದುವರೆಸುವಂತೆ ಜಿಲ್ಲಾ ನ್ಯಾಯಾಲಯಕ್ಕೆ ಟ್ರಂಪ್ ಮನವಿ ಮಾಡಿದ್ದರು.. ಅಮೆರಿಕದ ಜನ ಅತಿಥಿ ವಲಸೆಗಾರರಿಂದ ಅಷ್ಟೊಂದು ಸ್ಪರ್ಧೆ ಎದುರಿಸುತ್ತಿಲ್ಲವಾದ್ದರಿಂದ ವೀಸಾ ತಡೆ ಹಿಡಿಯದಂತೆ ಮನವಿ ಮಾಡಿಕೊಂಡಿದ್ದರು.