ವಾಷಿಂಗ್ಟನ್: ಕೊರೊನಾ ವೈರಸ್ ವಿರುದ್ಧ ಆಯುರ್ವೇದ ಔಷಧಿ ಸೂತ್ರೀಕರಣದಡಿ ಜಂಟಿ ಕ್ಲಿನಿಕಲ್ ಪ್ರಯೋಗಗಳನ್ನು ಆರಂಭಿಸಲು ಭಾರತ ಮತ್ತು ಅಮೆರಿಕದಲ್ಲಿನ ಆಯುರ್ವೇದ ವೈದ್ಯರು ಮತ್ತು ಸಂಶೋಧಕರು ನಿರ್ಧರಿಸಿದ್ದಾರೆ ಎಂದು ಭಾರತೀಯ ರಾಯಭಾರಿ ತಿಳಿಸಿದ್ದಾರೆ.
ಪ್ರಖ್ಯಾತ ಭಾರತೀಯ-ಅಮೆರಿಕನ್ ವಿಜ್ಞಾನಿಗಳು, ಶಿಕ್ಷಣ ತಜ್ಞರು ಮತ್ತು ವೈದ್ಯರ ತಂಡ ಬುಧವಾರ ಈ ಬಗ್ಗೆ ಸಂವಾದ ನಡೆಸಿದ್ದಾರೆ. ಭಾರತೀಯ ರಾಯಭಾರಿ ತರಣ್ಜಿತ್ ಸಿಂಗ್ ಸಂಧು ಇದನ್ನು ಖಚಿತಪಡಿಸಿದ್ದಾರೆ. 'ಸಾಂಸ್ಥಿಕ ಸಹಕಾರದ ಮೂಲಕ ಉಭಯ ದೇಶಗಳ ವೈಜ್ಞಾನಿಕ ಸಂಶೋಧನೆ ಇನ್ನಷ್ಟು ಹತ್ತಿರ ಬಂದಿದೆ' ಎಂದಿದ್ದಾರೆ.
ಜಂಟಿ ಸಂಶೋಧನೆ, ಬೋಧನೆ ಮತ್ತು ತರಬೇತಿ ಕಾರ್ಯಕ್ರಮಗಳ ಮೂಲಕ ಆಯುರ್ವೇದ ಔಷಧಿ ಉತ್ತೇಜಿಸಲು ನಮ್ಮ ಸಂಸ್ಥೆಗಳು ಸಹಕರಿಸುತ್ತಿವೆ. ಕೋವಿಡ್-19 ವಿರುದ್ಧ ಆಯುರ್ವೇದ ಸೂತ್ರೀಕರಣಗಳ ಜಂಟಿ ಕ್ಲಿನಿಕಲ್ ಪ್ರಯೋಗಗಳನ್ನು ಆರಂಭಿಸಲು ಎರಡೂ ದೇಶಗಳ ಆಯುರ್ವೇದ ವೈದ್ಯರು ಮತ್ತು ಸಂಶೋಧಕರು ಯೋಜಿಸುತ್ತಿದ್ದಾರೆ ಎಂದು ಸಂಧು ತಿಳಿಸಿದ್ದಾರೆ.
ನಮ್ಮ ವಿಜ್ಞಾನಿಗಳು ಮುಂದಿನ ದಿನಗಳಲ್ಲಿ ಜ್ಞಾನ ಮತ್ತು ಸಂಶೋಧನಾ ಸಂಪನ್ಮೂಲಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಇಂಡೋ-ಯುಎಸ್ ಸೈನ್ಸ್ ಟೆಕ್ನಾಲಜಿ ಫೋರಮ್ (ಐಯುಎಸ್ಎಸ್ಟಿಎಫ್) ಸಹಕಾರಿ ಚಟುವಟಿಕೆಗಳ ಮೂಲಕ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆಗಳಲ್ಲಿ ಶ್ರೇಷ್ಠತೆಯನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದರು.
ಕೋವಿಡ್-19 ಸಂಬಂಧಿತ ಸವಾಲುಗಳನ್ನು ಎದುರಿಸಲು ಜಂಟಿ ಸಂಶೋಧನೆ ಮತ್ತು ಪ್ರಾರಂಭಿಕ ಹಂತದಲ್ಲಿ ತೊಡಗಿಸಿಕೊಳ್ಳುವಿಕೆಯನ್ನು ಬೆಂಬಲಿಸಲು ಐಯುಎಸ್ಎಸ್ಟಿಎಫ್ ಕರೆ ನೀಡಿತ್ತು. ಫಾಸ್ಟ್ ಟ್ರ್ಯಾಕ್ ಮೋಡ್‌ನಲ್ಲಿ ಹೆಚ್ಚಿನ ಸಂಖ್ಯೆಯ ಪ್ರಸ್ತಾಪಗಳನ್ನು ಎರಡೂ ಕಡೆಯ ತಜ್ಞರು ಪರಿಶೀಲಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಕೈಗೆಟುಕುವ ಕಡಿಮೆ ಬೆಲೆಯ ಔಷಧಿ ಮತ್ತು ಲಸಿಕೆಗಳನ್ನು ತಯಾರಿಸುವಲ್ಲಿ ಭಾರತೀಯ ಔಷಧೀಯ ಕಂಪನಿಗಳು ಜಾಗತಿಕವಾಗಿ ಮುಂಚೂಣಿ ಸ್ಥಾನದಲ್ಲಿವೆ. ಈ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದರು.