ವಾಷಿಂಗ್ಟನ್: ಟಿಬೆಟ್ ಭೇಟಿ ನೀಡುತ್ತಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಡೆ ಭಾರತಕ್ಕೆ ಅಪಾಯಕಾರಿ ಸಂದೇಶ ಎಂದು ಅಮೆರಿಕ ಕಾಂಗ್ರೆಸ್ ವಕ್ತಾರ ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ಚೀನಾ ಆಕ್ರಮಣ ತಡೆಯುವಲ್ಲಿ ಜೋ ಬೈಡನ್ ಆಡಳಿತ ಶ್ರಮಿಸುತ್ತಿಲ್ಲ ಎಂದು ಅವರು ಇದೇ ವೇಳೆ ದೂರಿದ್ದಾರೆ.
ರಿಪಬ್ಲಿಕನ್ ಕಾಂಗ್ರೆಸ್ ವಕ್ತಾರ ಡೆವಿನ್ ನ್ಯುನ್ಸ್ ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿದ್ದು, ಕಳೆದ ವಾರವಷ್ಟೇ ಟಿಬೆಟ್ ಗಡಿಯಲ್ಲಿ ಚೀನಾ ಸರ್ವಾಧಿಕಾರಿ ವಿಜಯ ಘೋಷಿಸಿದ್ದಾರೆ. ಇದು ಕಳೆದ 30 ವರ್ಷದಲ್ಲಿ ಇದೇ ಮೊದಲು ಎಂದು ನನಗನ್ನಿಸುತ್ತದೆ. ಚೀನಾದ ಸರ್ವಾಧಿಕಾರಿಯೊಬ್ಬರು ಟಿಬೆಟ್‌ಗೆ ತೆರಳಿ ಭಾರತದ ವಿರುದ್ಧ ಮಾತನಾಡುತ್ತಾರೆ.
ಅವರ ಬಳಿ ಪರಮಾಣು ಶಕ್ತಿ ಇದೆ. ಅವರು ಟಿಬೆಟ್ನಲ್ಲಿ ಬಹುದೊಡ್ಡ ಯೋಜನೆ ಕಾರ್ಯಗತಗೊಳಿಸುತ್ತೇವೆ ಎಂದು ಭಾರತಕ್ಕೆ ಬೆದರಿಕೆ ಹಾಕುತ್ತಾರೆ. ಬಹುಶಃ ಭಾರತಕ್ಕೆ ನೀರಿನ ಹರಿವನ್ನೇ ನಿಲ್ಲಿಸಬಹುದು ಎಂದಿದ್ದಾರೆ.
ಟಿಬೆಟ್ ಪ್ರವಾಸದ ವೇಳೆ ಕ್ಸಿ ಅವರು ನ್ಯಾಂಗ್ ನದಿ ಸೇತುವೆಗೆ ಭೇಟಿ ನೀಡಿದ್ದರು. ಬಳಿಕ ಬ್ರಹ್ಮಪುತ್ರ ನದಿ ಜಲಾನಯನ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅಲ್ಲದೇ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಬೃಹತ್ ಡ್ಯಾಂ ನಿರ್ಮಿಸುವುದಾಗಿಯೂ ಚೀನಾ ತಿಳಿಸಿದ್ದು, ಮುಂದಿನ 5 ವರ್ಷದಲ್ಲಿ ಯೋಜನೆ ಸಿದ್ಧಗೊಳ್ಳಲಿದೆಯಂತೆ. ಇದು ಭಾರತ ಮತ್ತು ಬಾಂಗ್ಲಾದೇಶಕ್ಕೆ ಹೊಸ ತಲೆನೋವಾಗಿದೆ.
ಇದನ್ನೂ ಓದಿ: ಆಫ್ಘನ್ ಮೇಲಿನ ತಾಲಿಬಾನ್ ದಾಳಿಗೆ ಪಾಕ್ ಕೈ ಸಾಥ್: ಭಾರತ ಕಳವಳ